ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನಾಕರಿಯಾಗಿ ಮಾತನಾಡಿದ್ದ ಬಿಜೆಪಿಯ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್ ರವಿಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿಯಿಂದ ಜುಲೈ 1ರಂದು ವಿಧಾನಸೌಧ ಆವರಣದ ಮಹಾತ್ಮಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ವೇಳೆ ರವಿಕುಮಾರ್ ಅವರು ಶಾಲಿನಿ ರಜನೀಶ್ ಅವರ ಕುರಿತು “ಮುಖ್ಯ ಕಾರ್ಯದರ್ಶಿ ಶಾಲಿನಿ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿತ್ತು.
ಜೆ.ಪಿ.ನಗರದ ನಿವಾಸಿ, ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಗರ್ತನಾ ಅವರು ನೀಡಿದ ದೂರಿನ ಮೇರೆಗೆ ಇಂದು ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಸಂಬಂಧ ಎನ್.ರವಿಕುಮಾರ್ ಅವರಿಗೆ ನೋಟಿಸ್ ಜಾರಿ ವಿಚಾರಣೆ ನಡೆಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎನ್.ಮನೋಹರ್ ಅವರೂ ಎನ್.ರವಿಕುಮಾರ್ ಅವರ ವಿರುದ್ಧ ಬುಧವಾರ ದೂರು ನೀಡಿದ್ದರು.
ಗುರುವಾರ ಸಭಾಪತಿಗಳನ್ನು ಭೇಟಿಯಾದ ಸಲೀಂ ಅಹ್ಮದ್ ನಿಯೋಗವು, ಎನ್ ರವಿಕುಮಾರ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿಧಾನ ಪರಿಷತ್‌ನ ನಿಯಮಗಳು ಹಾಗೂ ನೈತಿಕ ಮಾರ್ಗಸೂಚಿಗಳ ಪ್ರಕಾರ ರವಿಕುಮಾರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಸಭಾಪತಿಗಳನ್ನು ನಿಯೋಗ ಆಗ್ರಹಿಸಿದೆ.