ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತದೆ ಮತ್ತು ರಾಜ್ಯದ ಹಣಕಾಸು ವ್ಯವಸ್ಥೆ ಹದಗೆಡುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆ ಭವಿಷ್ಯವನ್ನು ಸರಕಾರ ಸುಳ್ಳು ಮಾಡಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅಭಿಪ್ರಾಯಪಟ್ಟರು.
ಸೋಮವಾರ ಆರಂಭವಾರ ವಿಧಾಮಂಡಲ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, “ಪ್ರತಿಯೊಂದು ವಲಯದಲ್ಲೂ ರಾಜ್ಯವು ಉತ್ತಮವಾದ ಸಾಧನೆಗಳನ್ನು ದಾಖಲಿಸಿದೆ. ರಾಜ್ಯದ ಆದಾಯ ಹೆಚ್ಚುತ್ತಿದೆ. ರಾಜ್ಯಕ್ಕೆ ಖಾಸಗಿ ಬಂಡವಾಳ ದಾಖಲೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದಾಗಿ ಅಸಮಾನತೆಯ ತೀವ್ರತೆ ಕಡಿಮೆಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಎಸ್‌ಟಿ ಬೆಳವಣಿಗೆ ದರ ಉತ್ತಮವಾಗಿದೆ” ಎಂದರು.
“ಕರ್ನಾಟಕದಲ್ಲಿ ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನ ಸ್ನೇಹಿಯಾಗಿ ಕೆಲಸ ಮಾಡ್ತಿವೆ. ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ ಆದ್ಯತೆ ನೀಡುತ್ತಿದೆ. ರಾಜ್ಯದ ಅಭಿವೃದ್ಧಿಯ ವೇಗವನ್ನು ಸರ್ಕಾರ ಚುರುಕುಗೊಳಿಸುವುದರಲ್ಲಿ ಮತ್ತು ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಯಶಸ್ವಿಯಾಗಿದೆ. ಮಹಾತ್ಮಾ ಗಾಂಧಿಯವರು ಹೇಳಿದಂತೆ ಆಡಳಿತವನ್ನು ಅಂತಿಮ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವೆಂಬಂತೆ ಬಳಸಿಕೊಳ್ಳಲು ಸರ್ಕಾರ ಕಟಿಬದ್ದವಾಗಿದೆ” ಎಂದು ಹೇಳಿದರು.
“2024-25ನೇ ಸಾಲಿನ ಬಜೆಟ್‌ನಲ್ಲಿ ಆದೇಶ ಹೊರಡಿಸಬೇಕಾಗಿದ್ದ 344 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಘೋಷಣೆ ಮಾಡಿದ್ದ ಕಾರ್ಯಕ್ರಮಗಳೂ ಸಹ ಸಮರ್ಪಕವಾಗಿ ಅನುಷ್ಠಾನವಾಗುತ್ತಿವೆ. ಇನ್ನುಳಿದ ಘೋಷಣೆಗಳೂ ಆದೇಶ ಹೊರಡಿಸುವ ಹಂತದಲ್ಲಿವೆ” ಎಂದು ತಿಳಿಸಿದರು.
“ಸರ್ಕಾರವು ತೆಗೆದುಕೊಂಡ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ರೈತ ಕುಟುಂಬಗಳಲ್ಲಿ ಆತ್ಮಹತ್ಯೆಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಕಾಂಗ್ರೆಸ್ ಸರ್ಕಾರವು ರಚನೆಯಾದಾಗಿಂದಲೂ ತೊಗರಿ ಮತ್ತು ಕೊಬ್ಬರಿಗೆ ಬೆಲೆಗಳು ಕುಸಿದಾಗ ರೈತರ ನೆರವಿಗೆ ನಿಂತು ಪ್ರೋತ್ಸಾಹ ಧನವನ್ನು ನೀಡಿದೆ. ಕೃಷಿಭಾಗ್ಯ ಯೋಜನೆಯನ್ನು ಮುಂದುವರೆಸುವ ಮೂಲಕ ಅಗತ್ಯ ಇರುವ ಕಡೆಗಳಲ್ಲೆಲ್ಲಾ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ” ಎಂದರು.
“ಕರ್ನಾಟಕವು ಹಾಲಿನ ಉತ್ಪಾದನೆಯಲ್ಲಿ ದಾಖಲೆ ಬರೆದಿದೆ. ಕೆಎಂಎಫ್ ಈ ಬಾರಿ ದಿನವೊಂದಕ್ಕೆ 1 ಕೋಟಿ ಲೀಟರ್‌ಗಳಷ್ಟು ಹಾಲನ್ನು ಸಂಗ್ರಹಿಸಿದೆ. ಹೈನೋದ್ಯಮಕ್ಕೆ ನೀಡುತ್ತಿರುವ ಪ್ರೋತ್ಸಾಹದ ಕಾರಣಕ್ಕಾಗಿಯೇ ಈ ಸಾಧನೆ ಸಾಧ್ಯವಾಗಿದೆ. ಸರ್ಕಾರವು ಇದುವರೆಗೆ ಪಶುಪಾಲಕರಿಗೆ 1500 ಕೋಟಿ ರೂ.ಗಳಷ್ಟು ಪ್ರೋತ್ಸಾಹಧನ ನೀಡಿದೆ. ಸರ್ಕಾರವು ಪಶುಪಾಲಕರ ನೆರವಿಗಾಗಿ ಅನುಗ್ರಹ ಯೋಜನೆಯನ್ನು ಮುಂದುವರೆಸಿದೆ. ಪ್ರಸಕ್ತ ಸಾಲಿನಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ 24934 ರಾಸುಗಳು ಹಾಗೂ 33373 ಕುರಿ ಮತ್ತು ಮೇಕೆಗಳಿಗೆ 26.60 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ನೀಡಿದೆ” ಎಂದು ಹೇಳಿದರು.
ರಾಜ್ಯಪಾಲರ ಪೂರ್ಣ ಭಾಷಣ ಇಲ್ಲಿದೆ..