ವಿಜಯಪುರ ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ಪರಶುರಾಮ ಹೊಸಮನಿ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಯತ್ನಾಳ್ ವಿರುದ್ಧ ವಿಜಯಪುರ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅಕ್ಟೋಬರ್ 15ರಂದು ವಕ್ಫ್ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಯತ್ನಾಳ್ ಭಾಷಣ ಮಾಡುವಾಗ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಜತೆಗೆ ಮುಸ್ಲಿಂ ಧರ್ಮದ ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಖಾಸಗಿ ಸುದ್ದಿ ವಾಹಿನಿಯ ಯೂಟ್ಯೂಬ್ ನಲ್ಲಿ ಪ್ರಸಾರವಾದ ಯತ್ನಾಳ್ ಭಾಷಣ ಕೇಳಿ ಪರಶುರಾಮ ಹೊಸಮನಿ ಈ ದೂರು ಕೊಟ್ಟಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023 ರ (ಯು/ಎಸ್ -352, 353(2) ಕಲಂ ಅಡಿ ಕೇಸ್ ದಾಖಲಾಗಿದೆ.
ಹಿಂದೂ-ಮುಸ್ಲಿಂ ಜಾತಿ ಮಧ್ಯೆ ಗಲಭೆ ಸೃಷ್ಟಿಸುವ ಉದ್ದೇಶದಿಂದ ಭಾಷಣ ಮಾಡಿದ್ದು, ಕೋಮು ಗಲಭೆ ಆಗುವ ಲಕ್ಷಣಗಳು ಕಂಡು ಬರುತ್ತಿವೆ. ಭಯದ ವಾತಾವರಣ ಮೂಡಿಸಿದ ಕಾರಣ ಶಾಸಕ ಯತ್ನಾಳ್ ಹಾಗೂ ವೇದಿಕೆ ಮೇಲಿದ್ದ ಇತರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ವಿವರಿಸಲಾಗಿದೆ.