ಕೋಲಾರ ತಾಲ್ಲೂಕಿನ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಅವರ ಪುತ್ರ ಮೇಘಾವರ್ಷ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಪಾಪರಾಜನಹಳ್ಳಿ ಗ್ರಾಮದ ಮುನೇಶ್ವರ ದೇವಸ್ಥಾನದಲ್ಲಿ ಧ್ವನಿವರ್ಧಕ (ಮೈಕ್) ಹಾಕಿದ್ದರು. ಓದಲು ತೊಂದರೆ ಆಗುತ್ತಿದ್ದು, ಸೌಂಡ್ ಕಡಿಮೆ ಮಾಡುವಂತೆ ರಾಮಯ್ಯ ಮನವಿ ಮಾಡಲು ಹೋದ ವೇಳೆ ತಗಾದೆ ತೆಗೆದ ಗ್ರಾಮದ ಮೂವರು, ರಾಮಯ್ಯ ಹಾಗೂ ಮೇಘಾವರ್ಷ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಕಣ್ಣಿಗೆ ಗಾಯವಾಗಿದ್ದು, ವೈದ್ಯರು ಆಸ್ಪತ್ರೆಗೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆಸ್ಪತ್ರೆಗೆ ಎಸ್ಪಿ ನಾರಾಯಣ ಅವರು ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಿದರಲ್ಲದೆ, ಆರೋಪಿಗಳ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
“ಗ್ರಾಮದ ಮಂಜುನಾಥ್, ಭೈರಪ್ಪ ಹಾಗೂ ಸುಬ್ಬು ಎಂಬುವರು ರಾಮಯ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಜುನಾಥ್‌ನನ್ನು ಬಂಧಿಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾಧ್ಯಮಗಳಿಗೆ ತಿಳಿಸಿದ್ದಾರೆ.