ಪದೇ ಪದೆ ಬರಗಾಲ ಬರಲಿ ಎಂದು ರೈತರಿಗೆ ಆಸೆ ಇರುತ್ತದೆ. ಕಾರಣ ಬರಗಾಲ ಬಂದರೇ ರೈತರ ಸಾಲಮನ್ನಾ ಆಗಬಹುದು ಎಂಬ ನಿರೀಕ್ಷೆಯಲ್ಲಿರುತ್ತಾರೆ ಎಂದು ಸಕ್ಕರೆ ಕಾರ್ಖಾನೆ ಸಚಿವ ಶಿವಾನಂದ ಪಾಟೀಲ ಉಡಾಫೆ ಮಾತುಗಳನ್ನಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ-ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಸುದ್ದಿಗಾರರು ರೈತರ ಸಾಲಮನ್ನಾ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
“ಬರಗಾಲ ಬರಲೆಂದು ರೈತರು ಆಸೆಪಡುತ್ತಾರೆ. ಹಿಂದಿನ ಸರ್ಕಾರಗಳು ಬರಗಾಲದಲ್ಲಿ ಸಾಲ ಮನ್ನಾ ಮಾಡಿವೆ. ಆದ್ರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯಬೇಕು” ಎಂದರು.
“ಕೃಷ್ಣಾ ನದಿ ನೀರು ಪುಕ್ಸಟ್ಟೆ ಇದೆ, ಕರೆಂಟ್ ಕೂಡ ಪುಕ್ಸಟ್ಟೆ ಇದೆ. ಬಹಳಷ್ಟು ಮುಖ್ಯಮಂತ್ರಿಗಳು ಬಿತ್ತನೆ ಬೀಜ ಕೊಟ್ಟರು, ಗೊಬ್ಬರನೂ ಕೊಟ್ಟರು. ಕುಡಿದು ಕುಡಿದು ಸತ್ತರೂ, ಹೃದಯಾಘಾತದಿಂದ ಸತ್ತರೂ ಆತ್ಮಹತ್ಯೆ ಅಂತ ದೂರು ಕೊಟ್ಟರೇ ಪರಿಹಾರ ಸಿಗುತ್ತದೆ ಎನ್ನುವ ದುರಾಸೆ ಸಂಬಂಧಿಕರದ್ದು” ಎಂದು ಬೇಜವಾಬ್ದಾರಿಯಿಂದ ನುಡಿದರು.
“ರೈತರು ಇಂದಿನಿಂದಲ್ಲ ಹಿಂದಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅವತ್ತಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೇ ಪರಿಹಾರ ವಿಳಂಬ ಮಾಡುವುದಿಲ್ಲ. ಜನಪ್ರತಿನಿಧಿಗಳ ಮೇಲೆ ಜನ ಸಾಮಾನ್ಯರು ಒತ್ತಡ ತರುತ್ತಾರೆ. ಪರಿಹಾರ ಸಿಗಬಹುದು ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ” ಎಂದರು.
“ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ವರದಿ ಹೆಚ್ಚಳವಾಗುತ್ತಿದೆ. 2014 ರ ಹಿಂದೆ ಎಷ್ಟು, 2015 ರ ನಂತರ ಎಷ್ಟು ಜನರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನೀವೆ ನೋಡಿ. ಆ ವೇಳೆ ಇಷ್ಟೊಂದು ವರದಿ ಆಗುತ್ತಿರಲ್ಲಿ. ಇವಾಗ ಹೆಚ್ಚು ವರದಿ ಆಗುತ್ತಿವೆ” ಎಂದು ಹೇಳಿದರು.
“ಸಕ್ಕರೆ ಕಾರ್ಖಾನೆ ಮೋಸ ಮಾಡಿದರೆ ಅವರ ಲೈಸೆನ್ಸ್ ರದ್ಧತಿ ಮಾಡಲಾಗುವುದು. ಮುಂದಿನ ವರ್ಷ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಜಿಟಲ್ ತೂಕದ ಮಷಿನ್ ಅಳವಡಿಕೆ ಮಾಡಲಾಗುವುದು. ಕಳೆದ ಬಾರಿ ಸಕ್ಕರೆ ಕಾರ್ಖಾನೆಗಳು 19 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಉಳಿಸಿಕೊಂಡಿದ್ದರು. ನಾನು ಸಚಿವನಾದ ಬಳಿಕ 20 ಸಾವಿರ ಕೋಟಿ ರೂಪಾಯಿ ಕೊಡಿಸಲಾಗಿದೆ. ಹೆಚ್ಚು ಲಾಭದಲ್ಲಿರುವ ಕಂಪನಿಗಳಿಂದ 50 ರಿಂದ 100 ರೂ ವರೆಗೆ ಹೆಚ್ಚುವರಿ ಹಣವನ್ನು ಕೊಡಿಸಲಾಗಿದೆ” ಎಂದು ತಿಳಿಸಿದರು.