Homeಕರ್ನಾಟಕಕನ್ನಡದ ಪ್ರಸಿದ್ಧ ಕತೆಗಾರ, ವಿಮರ್ಶಕ ಡಾ. ಮೊಗಳ್ಳಿ ಗಣೇಶ್‌ ನಿಧನ

ಕನ್ನಡದ ಪ್ರಸಿದ್ಧ ಕತೆಗಾರ, ವಿಮರ್ಶಕ ಡಾ. ಮೊಗಳ್ಳಿ ಗಣೇಶ್‌ ನಿಧನ

ಕನ್ನಡದ ಕಾದಂಬರಿಕಾರ, ಕತೆಗಾರ, ವಿಮರ್ಶಕ ಡಾ. ಮೊಗಳ್ಳಿ ಗಣೇಶ್‌ ಅವರು (64)ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಿಜಯನಗರದ ಹೊಸಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ(ಅ.5ರಂದು) ಕೊನೆಯುಸಿರೆಳೆದರು.

ಕನ್ನಡದ ಖ್ಯಾತ ಕಥೆಗಾರ, ವಿಮರ್ಶಕ ಡಾ. ಮೊಗಳ್ಳಿ ಗಣೇಶ್ ಅವರ ನಿಧನಕ್ಕೆ ಕೇಂದ್ರ ಸಚಿವ ಕುಮಾರ ಸ್ವಾಮಿ, ಸಚಿವ ಎಚ್‌ಸಿ ಮಹದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ,ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಕನ್ನಡ ಸಾಹಿತ್ಯಕ್ಕೆ ಮೊಗಳ್ಳಿ ಗಣೇಶ ಅವರ ಕೊಡುಗೆ ಗಮನಾರ್ಹ. ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು.

ಮೊಗಳ್ಳಿ ಗಣೇಶರ ಕೃತಿಗಳು

ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ‘ಬೇರು’ ಅವರ ಬೃಹತ್ ಕಾದಂಬರಿ. ‘ಕಥನ’ ಅವರ ಪ್ರಬಂಧ ಸಂಕಲನ. ‘ಸೊಲ್ಲು’, ‘ವಿಮರ್ಶೆ’, ‘ಶಂಬಾ ಭಾಷಿಕ ಸಂಶೋಧನೆ’, ‘ತಕರಾರು’ ಅವರ ವಿಮರ್ಶಾ ಕೃತಿಗಳು. ‘ವಿಶ್ಲೇಷಣೆ’ ಎಂಬ ಅಂಕಣ ಕೂಡಾ ಜನಪ್ರಿಯ. ‘ ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ ’ ಅವರ ಚಿಂತನ ಕೃತಿ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಅನುವಾದಗೊಂಡಿದೆ.

ಮೊಗಳ್ಳಿ ಗಣೇಶರಿಗೆ ದಕ್ಕಿದ ಪ್ರಶಸ್ತಿಗಳು

ಮೊಗಳ್ಳಿ ಗಣೇಶ್ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ಡಾ.ರಾಜಕುಮಾರ್ ಹೆಸರಿನಲ್ಲಿರುವ ಅಧ್ಯಯನ ಪೀಠಕ್ಕೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ.ಆಗಿದ್ದ ಮೂಗಳ್ಳಿ ಗಣೇಶ್ ಅವರ ನಿಧಾನದಿಂದ ಕನ್ನಡ ಸಾಹಿತ್ಯ ಒಬ್ಬ ಅತ್ಯುತ್ತಮ ಬರಹಗಾರನನ್ನ ಕಳೆದುಕೊಂಡಿದೆ. ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಸಾಹಿತಿ ಮೊಗಳ್ಳಿ ಗಣೇಶ್ ಅವರ ಅಂತ್ಯಕ್ರಿಯೆಯು, ಅವರ ಸಹೋದರಿಯ ಗ್ರಾಮವಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಮಾದನಾಯಕನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಎಚ್‌ಡಿ ಕುಮಾರಸ್ವಾಮಿ ಸಂತಾಪ

ಕನ್ನಡದ ಹಿರಿಯ ಸಾಹಿತಿಗಳಾಗಿದ್ದ ಡಾ. ಮೊಗಳ್ಳಿ ಗಣೇಶ್ ಅವರ ನಿಧನದ ಸುದ್ದಿ ಕೇಳಿ ಅತೀವ ನೋವುಂಟಾಯಿತು. ಮೂಲತಃ ಚನ್ನಪಟ್ಟಣ ತಾಲೂಕಿನ ಸಂತೇಮೊಗಳ್ಳಿಯವರಾದ ಶ್ರೀ ಗಣೇಶ್ ಅವರು; ಕಥೆ, ಕಾದಂಬರಿ, ಕಾವ್ಯ ಹಾಗೂ ವಿಮರ್ಶೆ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಮಾಡಿದ್ದರಲ್ಲದೆ, ದಲಿತ ಚಳವಳಿಗೂ ಅನನ್ಯ ಕೊಡುಗೆ ನೀಡಿದ್ದರು. ಅವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ. ಗಣೇಶ್‌ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್‌ನಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರ ಸ್ವಾಮಿ ಅವರು ಟ್ವೀಟ್‌ ಮಾಡಿದ್ದಾರೆ.

ಮಹದೇವಪ್ಪ ಸಂತಾಪ

ಕನ್ನಡದ ಬಹುಮುಖ್ಯ ಕಥೆಗಾರರಾದ ಡಾ.ಮೊಗಳ್ಳಿ ಗಣೇಶ್ ಅವರು ಇಂದು ನಮ್ಮನ್ನು ಅಗಲಿದ್ದು ಅವರಿಗೆ ನನ್ನ ಭಾವಪೂರ್ಣ ನಮನಗಳು. ಇವರ ಅಗಲಿಕೆಯು ಕನ್ನಡ ಸಾಹಿತ್ಯ ಲೋಕಕ್ಕೆ ಇದು ಬಹುದೊಡ್ಡ ನಷ್ಟವಾಗಿದ್ದು ಈ ವೇಳೆ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ನೆನೆಯುವೆನು ಎಂದು ಸಚಿವ ಎಚ್‌ ಸಿ ಮಹದೇವಪ್ಪನವರು ಸಂತಾಪ ಸೂಚಿಸಿದರು.

ಹ್ಯಾರಿಸ್‌ರಿಂದ ಸಂತಾಪ

ಸಾಹಿತ್ಯದ ಮೂಲಕ ಸಮಾನತೆ, ಸೌಹಾರ್ದತೆ, ಸಹೋದರತೆಯನ್ನು ಪ್ರತಿಪಾದಿಸಿದ ಮೊಗ್ಗಳ್ಳಿ ಗಣೇಶ್ ಅವರ ನಿಧನದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಕನ್ನಡ ಕಥಾ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಸರು ಮೊಗಳ್ಳಿ ಗಣೇಶ್. ಅಷ್ಟೇ ಅಲ್ಲದೆ ಅವರ ವಿಮರ್ಶೆಗಳು ಹೊಸ ಚಿಂತನೆಗಳಿಗೆ ದಾರಿಮಾಡಿಕೊಟ್ಟಿತು. ಅವರ ನಿರ್ಗಮನವು ಈ ನಾಡಿಗೆ ತುಂಬಲಾರದ ನಷ್ಟ. ಮೃತರ ಕುಟುಂಬದವರು ಹಾಗೂ ಹಿತೈಷಿಗಳಿಗೆ ನನ್ನ ಸಾಂತ್ವನಗಳು ಎಂದು ಶಾಸಕ ಹ್ಯಾರಿಸ್‌ ಸಂತಾಪ ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments