ಮಹಾರಾಷ್ಟ್ರ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಕರ್ನಾಟಕದ ಬಗ್ಗೆ ಅವಮಾನ ಆಗುವ ರೀತಿಯಲ್ಲಿ ಜಾಹೀರಾತು ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ ಬಳಿಕ ಬಿಜೆಪಿಯವರು, ‘ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಅನುಷ್ಟಾನಗೊಂಡಿಲ್ಲ. ಮಹಾರಾಷ್ಟ್ರದಲ್ಲಿಯೂ ಅನುಷ್ಟಾನವಾಗುವುದಿಲ್ಲ’ ಎಂದು ಸುಳ್ಳು ಜಾಹೀರಾತು ನೀಡಿದ್ದಾರೆ. ಇದಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚಿಂತನೆ ನಡೆಸಲಾಗಿದೆ” ಎಂದರು.
“ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಿಗೆ ಬಜೆಟ್ನಲ್ಲಿ 56 ಸಾವಿರ ಕೋಟಿ ರೂ. ಮೀಸಲಿಟ್ಟು,
ಸಂಪೂರ್ಣವಾಗಿ ಅನುಷ್ಟಾನಗೊಳಿಸಿದೆ. ಇದಕ್ಕೆ ವಿರುದ್ಧವಾಗಿ ಇಡೀ ದೇಶದಲ್ಲಿ ಕರ್ನಾಟಕದ ಬಗ್ಗೆ ಅವಮಾನ ಆಗುವ ರೀತಿಯಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ ಎಂದರೆ ನಾವು ಖಂಡಿತವಾಗಿ ಸಹಿಸುವುದಿಲ್ಲ. ಸಂಬಂಧಪಟ್ಟ ಐದು ಇಲಾಖೆಗಳು ಜಾಹೀರಾತು ನೀಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ದೂರು ನೀಡಬೇಕಾಗುತ್ತದೆ” ಎಂದು ಹೇಳಿದರು.
“ತುಮಕೂರಿನಲ್ಲಿ ಗ್ಯಾರಂಟಿ ಯೋಜನೆಗ ಸಮಾವೇಶ ಹಮ್ಮಿಕೊಂಡಿಲ್ಲ. ತುಮಕೂರು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಹಾಗೂ ಅನೇಕ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗುತ್ತದೆ. ಇದೇ ರೀತಿ ಎಂಟು ತಿಂಗಳ ಹಿಂದೆಯೂ ಕಾರ್ಯಕ್ರಮ ಮಾಡಲಾಗಿತ್ತು” ಎಂದು ತಿಳಿಸಿದರು.
“ಬಿಜೆಪಿ ಮತ್ತು ಜೆಡಿಎಸ್ನವರು ಸರ್ಕಾರದಲ್ಲಿ ಅನುದಾನವಿಲ್ಲ, ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಜನರಲ್ಲಿ ತಪ್ಪು ಮಾಹಿತಿಯನ್ನು ಹೇಳಿಕೊಂಡು ಬರುತ್ತಿದ್ದಾರೆ. ಎಲ್ಲ ಇಲಾಖೆಗಳಿಗೆ ಅನುದಾನ ಕೊಟ್ಟಿದ್ದೇವೆ. ಯೋಜನೆಗಳನ್ನು ಜನಸಮುದಾಯಕ್ಕೆ ತಲುಪಿಸುತ್ತಿದ್ದೇವೆ ಎಂಬ ಸಂದೇಶ ಈ ಕಾರ್ಯಕ್ರಮದಿಂದ ಹೋಗುತ್ತದೆ” ಎಂದರು.
“ಕಳೆದೊಂದು ವಾರದಿಂದ ನಕ್ಸಲ್ ಚಟುವಟಿಕೆಗಳ ಮೇಲೆ ಪೊಲೀಸರು ಮೇಲೆ ನಿಗಾವಹಿಸಿದ್ದರು. ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆಗಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ಕೂಂಬಿಂಗ್ ವೇಳೆ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರಿಸಿದ್ದರು. ಕಾರ್ಯಾಚರಣೆ ವೇಳೆ ಪೊಲೀಸರು ಕಂಡ ತಕ್ಷಣ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎನ್ಕೌಂಟರ್ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಇನ್ನು ಇಬ್ಬರು ಮೂವರು ತಪ್ಪಿಸಿಕೊಂಡಿದ್ದಾರೆ ಎಂಬುದು ಈವರೆಗಿನ ಮಾಹಿತಿ. ಹೆಚ್ಚಿನ ಮಾಹಿತಿ ಲಭ್ಯವಾದ ನಂತರ ಹಂಚಿಕೊಳ್ಳುತ್ತೇನೆ” ಎಂದು ತಿಳಿಸಿದರು.
ಅನುದಾನ ವಿಚಾರವಾಗಿ ಶಾಸಕ ಗವಿಯಪ್ಪ ಅಸಮಾದಾನದ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯವರು ಕೆಕೆಆರ್ಡಿಬಿ ಹಣ ಬಿಡುಗಡೆ ಮಾಡಿದ್ದಾರೆ. ಅಜಯ್ ಸಿಂಗ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ಸಭೆ ಸಭೆ ನಡೆಸಿದ್ದಾರೆ. ಪ್ರತ್ಯೇಕವಾಗಿ ಸಭೆ ಮಾಡಿ ಅಲೋಕೆಷನ್ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ. ಕೋವಿಡ್ ಅಕ್ರಮದ ಬಗ್ಗೆ ಜಸ್ಟೀಸ್ ಮೈಕಲ್ ಡಿ.ಕುನ್ಹಾ ಅವರು ಕೊಟ್ಟಿರುವ ವರದಿಯನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.