“ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಟಾರ್ಟ್ ಅಪ್ ಗಳಿಗೆ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಕೊನೆ ದಿನವನ್ನು 2024ರ ಫೆಬ್ರವರಿ 1ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಹಿಂದೆ 2023ರ ಡಿಸೆಂಬರ್ 23ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಹೊಸ ಹೊಸ ಸ್ಟಾರ್ಟ್ಅಪ್ಗಳಿಂದ ವಿನೂತನ ಚಿಂತನೆಯನ್ನು ಹೊರತಂದು ಅದನ್ನು ಪೋಷಿಸುವ ಜೊತೆಗೆ ವಿವಿಧ ಹಂತಗಳಲ್ಲಿ ಹಣಕಾಸಿನ ನೆರವು ನೀಡುವ ಉದ್ದೇಶದಿಂದ “Idea2PoC-ಎಲಿವೇಟೆಡ್” (ಗ್ರಾಂಟ್-ಇನ್-ಏಡ್) ಯೋಜನೆಯನ್ನು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಜಾರಿಗೆ ತಂದಿತ್ತು.
ಮಾರುಕಟ್ಟೆ ಅಭಿವೃದ್ಧಿ ಮತ್ತು ಸ್ಕೇಲ್-ಅಪ್ ಅಭಿವೃದ್ಧಿಪಡಿಸಲು ಆರಂಭಿಕ ಹಂತದ ಹಣಕಾಸಿನ ಅವಶ್ಯಕತೆ ಸ್ಟಾರ್ಟ್ಅಪ್ಗಳಿಗೆ ಬೇಕಾಗಲಿದ್ದು, ಇದಕ್ಕಾಗಿ 50 ಲಕ್ಷಗಳವರೆಗೆ ಅನುದಾನ ನೀಡುವುದು ಈ ಯೋಜನೆಯ ಉದ್ದೇಶಿಸಿದೆ.
ಪ್ರಮುಖವಾಗಿ ಮಾರ್ಗದರ್ಶಕರು, ನೆಟ್ವರ್ಕಿಂಗ್ ಅವಕಾಶಗಳು, ಇನ್ಕ್ಯುಬೇಶನ್ ಸೌಲಭ್ಯಗಳು ಇತ್ಯಾದಿ ಸೇರಿದಂತೆ ಹಲವು ಕ್ಷೇತ್ರಗಳ ಸ್ಟಾರ್ಟ್ಅಪ್ಗಳಿಗೆ ಸಮಗ್ರ ಉದ್ಯಮಶೀಲತಾ ವೇದಿಕೆಯನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.
‘Idea2PoC-ಎಲಿವೇಟೆಡ್’ ಯೋಜನೆಯು ವಿಭಿನ್ನ ಅನ್ವೇಷಣೆಗಳೊಂದಿಗೆ ಮುಂದೆ ಬರುವ ಉದಯೋನ್ಮುಖ ಸ್ಟಾರ್ಟ್ಅಪ್ಗಳಿಗೆ ಹಣಕಾಸಿನ ನೆರವು ನೀಡುವುದಾಗಿದೆ. ಈ ಯೋಜನೆಗೆ ಸ್ಟಾರ್ಟ್ಅಪ್ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಟಾರ್ಟ್ಅಪ್ಗಳು ತಮ್ಮ ಅರ್ಜಿ ಸಲ್ಲಿಸಲು ಇನ್ನಷ್ಟು ದಿನಗಳ ಕಾಲಾವಕಾಶ ಬೇಕೆಂಬುದನ್ನು ಮನಗಂಡು ಅರ್ಜಿ ಸಲ್ಲಿಕೆಯ ಕೊನೆಯ ದಿನವನ್ನು ಮುಂದೂಡಿ, ಇನ್ನಷ್ಟು ದಿನಗಳ ಕಾಲಾವಕಾಶ ನೀಡಲಾಗಿದೆ, ಈ ಮೂಲಕ ಮತ್ತಷ್ಟು ಸ್ಟಾರ್ಟ್ಅಪ್ಗಳು ಅರ್ಜಿ ಸಲ್ಲಿಸಲು ಅವಕಾಶ ನೀಡುವುದು ಇಲಾಖೆಯ ಉದ್ದೇಶವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ಹೇಳಿದ್ದಾರೆ.
ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ಗಳು ತಮ್ಮ ವಿಶಿಷ್ಟ ಹಾಗ ವಿನೂತನ ಚಿಂತನೆಗಳಿಗೆ ಹಣಕಾಸು ಹೊಂದಿಸಿಕೊಳ್ಳಲು ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆಯಲ್ಲದೆ, ಕಾಲಾವಕಾಶ ಹೆಚ್ಚಿಸಿರುವುದರಿಂದ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಚಿವ ಖರ್ಗೆ ತಿಳಿಸಿದ್ದು ಈ ವಿಸ್ತರಣೆಯು ಹೆಚ್ಚಿನ ಸ್ಟಾರ್ಟ್ಅಪ್ಗಳಿಗೆ ಭಾಗವಹಿಸಲು ಅವಕಾಶ ನೀಡುವುದು ಎಂದಿದ್ದಾರೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ನಿಗದಿಯಾಗಿದ್ದ ಗಡುವು: ಡಿಸೆಂಬರ್ 23, 2023; ಸಂಜೆ 5 ಗಂಟೆ.
ಅರ್ಜಿ ಸಲ್ಲಿಸಲು ವಿಸ್ತರಿಸಲಾಗಿರುವ ಗಡುವು: ಜನವರಿ 1, 2024; ಸಂಜೆ 5 ಗಂಟೆ
ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿಗಳನ್ನು ಸಲ್ಲಿಸಲು, ಭೇಟಿ ನೀಡಿ: ಸ್ಟಾರ್ಟ್ಅಪ್ ಕರ್ನಾಟಕ (missionstartupkarnataka.org)