ಉತ್ತರ ಪ್ರದೇಶದ ಬುಲ್ಡೋಜರ್ ನ್ಯಾಯದ ಸಾಂವಿಧಾನಿಕ ಸಿಂಧುತ್ವದ ಕುರಿತು ಬುಧವಾರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ‘ಕಾರ್ಯಾಂಗ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ನ್ಯಾಯದ ಹೆಸರಿನಲ್ಲಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸಲು ಮತ್ತು ಅವರ ಮನೆಯನ್ನು ಕೆಡುವುದು ಅಸಂವಿಧಾನಿಕ’ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಉತ್ತರ ಪ್ರದೇಶ ಸರ್ಕಾರ ನಡೆಸುತ್ತಿರುವ ಬುಲ್ಡೋಜರ್ ಕಾರ್ಯಾಚರಣೆ ಸಂಬಂಧ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡದೆ ಯಾವುದೇ ನೆಲಸಮವನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ, ಕೇವಲ ಆರೋಪಿಗಳು ಅಥವಾ ಅಪರಾಧಿಗಳು ಎಂಬ ಕಾರಣಕ್ಕಾಗಿ ಜನರ ಮನೆಗಳನ್ನು ಕೆಡವಿದರೆ ಅದು ಸಂಪೂರ್ಣವಾಗಿ ಅಸಂವಿಧಾನಿಕ ಎಂದು ತೀರ್ಪು ನೀಡಿದೆ.
ಬುಲ್ಡೋಜರ್‌ಗಳನ್ನು ನಿರಂಕುಶವಾಗಿ ಬಳಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪರಾಧಕ್ಕೆ ಶಿಕ್ಷೆ ನೀಡುವುದು ನ್ಯಾಯಾಲಯದ ಕೆಲಸ. ಆರೋಪಿ ಮತ್ತು ಶಿಕ್ಷೆಗೊಳಗಾದವರಿಗೂ ಕೆಲವು ಹಕ್ಕುಗಳಿವೆ. ಆರೋಪಿ ಎಂಬ ಕಾರಣಕ್ಕೆ ಮನೆ ಕೆಡವುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದಿದೆ.
ಬುಲ್ಡೋಜರ್ ಕ್ರಮಕ್ಕೆ ಮುನ್ನ ಆರೋಪಿಗಳ ಪರ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಿಯಮಾನುಸಾರ ನೋಟಿಸ್ ಜಾರಿ ಮಾಡಬೇಕು. ನೋಟಿಸ್ ಅನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಬೇಕು ಮತ್ತು ಮನೆಯ ಮೇಲೆ ಅಂಟಿಸಬೇಕು ಎಂದು ಹೇಳಿದೆ.
ಮನಬಂದಂತೆ ಮನೆ ಕೆಡವಿದರೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾನೂನು ಪ್ರಕ್ರಿಯೆ ಇಲ್ಲದೆ ಬುಲ್ಡೋಜರ್‌ಗಳನ್ನು ನಡೆಸುವುದು ಸಂವಿಧಾನ ಬಾಹಿರ. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕುಟುಂಬವನ್ನು ಶಿಕ್ಷಿಸಲು ಸಾಧ್ಯವಿಲ್ಲ. ಒಬ್ಬನೇ ಆರೋಪಿಯಾಗಿದ್ದರೆ ಇಡೀ ಕುಟುಂಬದಿಂದ ಮನೆಯನ್ನು ಏಕೆ ಕಳೆದುಕೊಳ್ಳಬೇಕು ಎಂದು ಪ್ರಶ್ನಿಸಿದೆ.
ಯಾವುದೇ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲಾದ ವ್ಯಕ್ತಿಗೆ ಸೇರಿದ ಮನೆ ಅಥವಾ ಅಂಗಡಿಯನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸುವುದನ್ನು ತಡೆಯುವುದಕ್ಕಾಗಿ ದೇಶದಾದ್ಯಂತ ಅನ್ವಯವಾಗುವ ಮಾರ್ಗಸೂಚಿಗಳನ್ನು ಒಳಗೊಂಡ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ.