ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ತಲಾ 10 ರೂ.ಗಳಷ್ಟು ಕಡಿತಗೊಳಿಸಿ ಶುಕ್ರವಾರ ಆದೇಶಿಸಿದೆ. ಈ ಮೂಲಕ ಪೆಟ್ರೋಲ್ ಮೇಲಿನ ಸುಂಕವು 3 ರೂ.ಗೆ ಮತ್ತು ಡೀಸೆಲ್ ಮೇಲಿನ ಸುಂಕವು ಶೂನ್ಯಕ್ಕೆ ಇಳಿದಿದೆ.
ಇರಾನ್ ವಿರುದ್ಧ ಇಸ್ರೇಲ್-ಅಮೆರಿಕ ಯುದ್ಧದಿಂದ ಉಂಟಾಗಿರುವ ಇಂಧನ ಸಮಸ್ಯೆಯ ನಡುವೆ ಕೇಂದ್ರ ಸರ್ಕಾರವು ಮಹತ್ವದ ಪರಿಹಾರ ಕ್ರಮವಾಗಿ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.
ಪೆಟ್ರೋಲ್ ಮೇಲಿನ ಸುಂಕವನ್ನು ಲೀಟರ್ಗೆ 13 ರೂಪಾಯಿಯಿಂದ 3 ರೂಪಾಯಿಗೆ ಇಳಿಸಲಾಗಿದ್ದು, ಡೀಸೆಲ್ ಮೇಲಿನ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈಗ ಡೀಸೆಲ್ ಮೇಲೆ ಅಬಕಾರಿ ಸುಂಕ ಶೂನ್ಯವಾಗಿದ್ದು, ಮೊದಲು ಇದು 10 ರೂಪಾಯಿಗಳಾಗಿತ್ತು. ಈ ನಿರ್ಧಾರವನ್ನು ಗುರುವಾರವೇ ಹಣಕಾಸು ಸಚಿವಾಲಯ ಪ್ರಕಟಿಸಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ.
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ದಾಳಿ ಮಾಡಿದಾಗಿನಿಂದ ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ಸೃಷ್ಟಿಯಾಗಿದೆ. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಿಂದ ಕೆರಳಿರುವ ಇರಾನ್, ಹೊರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಿದ್ದು, ತೈಲ ಸಾಗಣೆ ಹಡಗುಗಳ ಸಂಚಾರವನ್ನು ನಿರ್ಬಂಧಿಸಿವೆ.
ಇದರಿಂದಾಗಿ, ಭಾರತದಲ್ಲೂ ತೈಲ ವ್ಯತ್ಯಯದ ಆತಂಕ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಲಿದೆ ಎನ್ನಲಾಗಿತ್ತು. ಖಾಸಗಿ ವಲಯದ ಅತಿದೊಡ್ಡ ತೈಲೋತ್ಪನ್ನ ಮಾರಾಟ ಕಂಪನಿ ನಯಾರಾ ಎನರ್ಜಿ, ಗುರುವಾರವಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ ಕ್ರಮವಾಗಿ₹ 5 ಹಾಗೂ ₹3 ರಷ್ಟು ಹೆಚ್ಚಿಸಿತ್ತು.
ಗಮನಾರ್ಹ ಸಂಗತಿ ಏನೆಂದರೆ ಕಡಿತದ ಲಾಭ ಗ್ರಾಹಕರಿಗೆ ಸಿಗುವ ಸಾಧ್ಯತೆ ಕಡಿಮೆ. ತೈಲ ಮಾರುಕಟ್ಟೆ ಕಂಪನಿಗಳು (OMC) ಅನುಭವಿಸುತ್ತಿರುವ ಭಾರಿ ನಷ್ಟವನ್ನು ಸರಿದೂಗಿಸಲು ಈ ಸುಂಕದ ವಿನಾಯಿತಿಯನ್ನು ಬಳಸಿಕೊಳ್ಳಲಿವೆ ಎಂದು ಹೇಳಲಾಗಿದೆ.


