ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ರಫ್ತು ಉತ್ತೇಜಿಸಲು ಸರ್ಕಾರ ಗರಿಷ್ಠ ನೆರವು ಒದಗಿಸುತ್ತಿದೆ. ಈ ಸಾಲಿನಲ್ಲಿ ವಿಮಾನ ನಿಲ್ದಾಣಗಳ ಹತ್ತಿರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಸೋಗಾನೆ ಹಾಗೂ ವಿಜಯಪುರದ ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್ ಸ್ಥಾಪಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿ ಸದಸ್ಯರಾದ ಟಿ ಬಿ ಜಯಚಂದ್ರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸದ ಸಚಿವರು, “ರಾಜ್ಯದಲ್ಲಿ ಪುಡ್ ಪಾರ್ಕ್‌ಗಳ ಸ್ಥಾಪನೆಗೆ ಪ್ರೋತ್ಸಾಹದ ಜೊತೆಗೆ ಬ್ರಾಂಡಿಗೂ ನೆರವು ಒದಗಿಸಲಾಗುವುದು” ಎಂದರು.
“ಆಹಾರ ಪಾರ್ಕ್‍ಗಳ ಅನುಷ್ಠಾನಕ್ಕೆ ಹಾಗೂ ಮೇಲುಸ್ತುವಾರಿ ನಿರ್ವಹಿಸಲು ಆಹಾರ ಕರ್ನಾಟಕ ನಿಯಮಿತ ಎಂಬ ವಿಶೇಷ ಉದ್ದೇಶ ಸಂಸ್ಥೆಯನ್ನು 2003ರಲ್ಲಿ ಕಂಪನಿ ಕಾಯ್ದೆ 1956ರಡಿಯಲ್ಲಿ ಸ್ಥಾಪಿಸಲಾಗಿದೆ. ಆಹಾರ ಕರ್ನಾಟಕ ನಿಯಮಿತವು ಈ ಹಿಂದೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿಯಲ್ಲಿದ್ದು, ಪ್ರಸ್ತುತ ಕೃಷಿ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ” ಎಂದು ಮಾಹಿತಿ ನೀಡಿದರು.
“ಹತ್ತನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ನಾಲ್ಕು ಆಹಾರ ಪಾರ್ಕ್ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಅದರಂತೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಅಕ್ಷಯ ಫುಡ್ ಪಾರ್ಕ್, ಬಾಗಲಕೋಟೆಯಲ್ಲಿ ಗ್ರೀನ್ ಫುಡ್ ಪಾರ್ಕ್, ಕೋಲಾರ ಜಿಲ್ಲೆ ಮಾಲೂರಿನಲ್ಲಿ ಇನ್ನೋವಾ ಅಗ್ರಿ ಬಯೋಪಾರ್ಕ್ ಹಾಗೂ ಕಲಬುರ್ಗಿ ಜಿಲ್ಲೆಯ ಜೇವರ್ಗಿಯಲ್ಲಿ ಫುಡ್ ಪಾರ್ಕ್ ಸ್ಥಾಪಿಸಲಾಗಿದೆ” ಎಂದು ಹೇಳಿದರು.
“ಈಗ ಉದ್ದೇಶಿತ ಯೋಜನೆಯನ್ವಯ ಪ್ರತಿ ಆಹಾರ ಪಾರ್ಕ್ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದಲ್ಲಿ ಒಟ್ಟು 800 ಲಕ್ಷ ರೂ. ಸಹಾಯ ಧನ/ಬಡ್ಡಿ ರಹಿತ ಅಸುರಕ್ಷಿತ ಸಾಲದ ರೂಪದಲ್ಲಿ ಮಂಜೂರು ಮಾಡಿರುತ್ತದೆ” ಎಂದು ಕೃಷಿ ಸಚಿವರು ಹೇಳಿದರು.
“ಘಟಕ ಪ್ರಾರಂಭಿಸಲು ಆಸಕ್ತಿ ವಹಿಸದ ಉದ್ದಿಮೆದಾರರಿಂದ ಕೈಗಾರಿಕಾ ನಿವೇಶನಗಳನ್ನು ಮರು ಹಂಚಿಕೆ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಹಯೋಗದೊಂದಿಗೆ ಕ್ರಮವಹಿಸಲು ಸೂಚಿಸಲಾಗಿದೆ” ಎಂದು ಇದೇ ವೇಳೆ ಸಚಿವರು ತಿಳಿಸಿದರು.