ಅಧಿಕಾರಿ ಚಂದ್ರಶೇಖರ್ ಸಾವಿಗೆ ಕಾರಣರಾದವರಿಗೆ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಎರಡೂ ಆಯಾಮದಲ್ಲಿ ಸಿಐಡಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಶಿವಮೊಗ್ಗದ ವಿನೋಬನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
“ಮೃತರಾಗಿರುವ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಏನು ನಡೆದಿದೆ ಎಂಬ ಸತ್ಯಾಂಶ ಪತ್ತೆ ಮಾಡಲಿದ್ದಾರೆ” ಎಂದು ತಿಳಿಸಿದರು.
“ಬೇರೆ ಬೇರೆ ಖಾತೆಗಳಿಗೆ ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎಂಬ ಆರೋಪವಿದೆ. ಚಂದ್ರಶೇಖರ್ ಅಲ್ಲಿ ಕೆಲಸ ಮಾಡುತ್ತಿದ್ದರು. ಇದಕ್ಕೆ ಅವರ ಮೇಲೆ ಏನಾದರೂ ಒತ್ತಡವಿತ್ತೆ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ತನಿಖೆಯ ನಂತರ ಸತ್ಯಾಂಶ ಗೊತ್ತಾಗಲಿದೆ” ಎಂದರು.
“ಚಂದ್ರಶೇಖರ್‌ನನ್ನು ಕಳೆದುಕೊಂಡಿರುವ ಕುಟುಂಬಸ್ಥರು ನೋವನ್ನು ಅನುಭವಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಒಡವೆ ಅಡವಿಟ್ಟು ಆತನ ಜೀವ ಉಳಿಸಿಕೊಂಡಿದ್ದರು. ವಿಧಿ ಈ ರೀತಿ ಮಾಡುತ್ತದೆ ಎಂದು ಭಾವಿಸಿರಲಿಲ್ಲ. ಕುಟುಂಬದ ಪರಿಸ್ಥಿತಿಯನ್ನು ಪತ್ನಿ ಅಳಲು ತೋಡಿಕೊಂಡರು. ಸರ್ಕಾರ ನೊಂದ ಕುಟುಂಬದ ಪರ ನಿಲ್ಲಲಿದೆ. ಜೂನ್ 6ರ ನಂತರ ಪರಿಹಾರ ಕಲ್ಪಿಸಲಾಗುವುದು” ಎಂದು ತಿಳಿಸಿದರು.
“ಹಣ ವರ್ಗಾವಣೆಗೆ ಸಚಿವರು ಮೌಖಿಕ ಆದೇಶ ಕೊಟ್ಟಿದ್ದರು ಎಂಬುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ತನಿಖೆಯ ವರದಿ ಬರುವವರೆಗೂ ಈ ಬಗ್ಗೆ ಏನನ್ನು ಹೇಳಲಾಗುವುದಿಲ್ಲ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರ ಹೆಸರು ಉಲ್ಲೇಖವಾಗಿತ್ತು. ಈಶ್ವರಪ್ಪ ಪ್ರಕರಣಕ್ಕೆ, ಈ ಪ್ರಕರಣವನ್ನು ಹೋಲಿಸಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಬಿಜೆಪಿಯವರನ್ನು ಕೇಳಿ ಆಡಳಿತ ನಡೆಸುವ ಅನಿವಾರ್ಯತೆ ನಮಗಿಲ್ಲ. ಅವರನ್ನು ಕೇಳಿ ಆಡಳಿತ ನಡೆಸುವ ಹಾಗಿದ್ದರೆ ಜನ ನಮ್ಮನ್ನು ಆಯ್ಕೆ ಮಾಡಿ ಕಳುಹಿಸುತ್ತಿರಲಿಲ್ಲ” ಎಂದು ಟೀಕಿಸಿದರು.
ಸಚಿವ ನಾಗೇಂದ್ರ ಅವರುವನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯವರ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಅವರು, “ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತಾರೆ. ಅದಕ್ಕಾಗಿಯೇ ತನಿಖೆ ನಡೆಸಲಾಗುತ್ತಿದೆ. ಸತ್ಯ ಏನೆಂಬುದು ಹೊರಬರುತ್ತದೆ” ಎಂದರು.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ” ಬಿಜೆಪಿಯವರು ನಾಲ್ಕು ವರ್ಷದ ಆಡಳಿತ ಅವಧಿಯಲ್ಲಿ ನೇಮಕಾತಿ ಮಾಡಿಕೊಂಡಿಲ್ಲ. ನಮ್ಮ ಸರ್ಕಾರ ಬಂದ ನಂತರ ಈಗ ನೇಮಕಾತಿ ನಡೆಯುತ್ತಿದೆ. 545 ಪಿಎಸ್ಐ ಹುದ್ದೆಗಳ ನೇಮಕಾತಿ ಪಟ್ಟಿ ಇನ್ನು ಕೆಲ ದಿನಗಳಲ್ಲಿ ಬಡುಗಡೆಯಾಗುತ್ತದೆ. ಅವರು ಕರ್ತವ್ಯಕ್ಕೆ ಹಾಜರಾಗಲು ಒಂದೂವರೇ ವರ್ಷ ಬೇಕಾಗುತ್ತದೆ” ಎಂದರು.
ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮಾಜಿ ಸಂಸದರಾದ ಆಯನೂರು ಮಂಜುನಾಥ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿ ಕುಮಾರ್, ಮುಖಂಡರಾದ ಯೋಗೇಶ್, ಶಿವಕುಮಾರ್ ಇದ್ದರು.