ಒಂದು ಯೂನಿಟ್ ವಿದ್ಯುತ್ ಉಳಿತಾಯ ಎರಡು ಯೂನಿಟ್‌ಗಳ ಉತ್ಪಾದನೆಗೆ ಸಮ ಎಂದು ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ ಪಿ ರುದ್ರಪ್ಪಯ್ಯ ತಿಳಿಸಿದರು.
ನಾಗರಬಾವಿಯ ಕ್ರೆಡಲ್ ಕೇಂದ್ರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆಯಲ್ಲಿ ಪಾಲ್ಗೊಂಡು, ಹೆಗ್ಗನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
“ಕೇಂದ್ರದ ಇಂಧನ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುವ ‘ಇಂಧನ ದಕ್ಷತೆಯ ಬ್ಯೂರೋ’ (ಬಿಇಇ), ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಸಾರುವ ಉದ್ದೇಶದಿಂದ ಎಲ್ಲ ರಾಜ್ಯಗಳಲ್ಲಿ ಇಂಧನ ಇಲಾಖೆ ವತಿಯಿಂದ ಸಪ್ತಾಹದ ಆಚರಣೆಯನ್ನು ಕಡ್ಡಾಯಗೊಳಿಸಿದೆ. ಇಂಧನ ಸಂರಕ್ಷಣಾ ಸಪ್ತಾಹದ ಸಂದರ್ಭದಲ್ಲಿ ಇಂಧನ ಬಳಕೆಯ ಪ್ರಮಾಣ ತಗ್ಗಿಸುವುದು, ಇಂಧನದ ದಕ್ಷ ಬಳಕೆಯನ್ನು ಉತ್ತೇಜಿಸುವುದು ಮತ್ತು ರಾಜ್ಯದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಬೆಳೆಸುವ ಬಗ್ಗೆ ರಾಜ್ಯದ ನೋಡಲ್ ಏಜೆನ್ಸಿಯಾದ ಕ್ರೆಡಲ್ ಜಾಗೃತಿ ಮೂಡಿಸಲಿದೆ. ನಾವೆಲ್ಲರೂ ತಿಳಿದು, ಪಾಲಿಸಲೇಬೇಕಾದ ಸಂಗತಿ ಎಂದರೆ, ಒಂದು ಯೂನಿಟ್ ವಿದ್ಯುತ್ ಉಳಿತಾಯ ಎರಡು ಯೂನಿಟ್‌ಗಳ ಉತ್ಪಾದನೆಗೆ ಸಮ “ಎಂದರು.
“ಇಂಧನ ಸಂರಕ್ಷಣೆ ಹಾಗೂ ಇಂಧನ ದಕ್ಷತೆ ಮನೆಯಿಂದಲೇ ಆರಂಭವಾಗಬೇಕು. ಯಾರು ಇಲ್ಲದ ಸಮಯದಲ್ಲಿ ಕೊಠಡಿಯ ಫ್ಯಾನ್, ದೀಪ ಆರಿಸಬೇಕು. ಬಿಎಸ್‌ಇ 5 ಸ್ಟಾರ್ ರೇಟೆಡ್‌ನ ಎಸಿ, ಫ್ರಿಡ್ಜ್, ಫ್ಯಾನ್ ಹಾಗೂ ಇತರ ವಿದ್ಯುತ್ ಉಪಕರಣಗಳನ್ನು ಬಳಸಿ. ಸಾಧ್ಯವಾದಷ್ಟು ಸಮೂಹ ಸಾರಿಗೆ ಬಳಿಸಿ. ಮನೆಯಲ್ಲಿ ಮಕ್ಕಳು ಜಾಗೃತರಾದರೆ, ಮನೆಯ ಎಲ್ಲರಿಗೂ ಅರಿವು ಮೂಡಿಸಿದಂತೆ ಆಗುವುದು. ಇಂಧನ ಸಂರಕ್ಷಣೆ ಬಗ್ಗೆ ಪೋಷಕರಿಗೆ ತಿಳಿಸಬೇಕು” ಎಂದು ಮನವಿ ಮಾಡಿದರು.
“ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವ ಹಾಗೂ ಕ್ರೆಡಲ್ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಇಂಧನ ಸಂರಕ್ಷಣಾ ದಿನ ಆಚರಿಸಲಾಗುತ್ತಿದೆ. ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಚಿತ್ರ ಬಿಡಿಸುವ ಸ್ಪರ್ಧೆಯ ಅತ್ಯುತ್ತಮ ಚಿತ್ರವನ್ನು ಇಂಧನ ಸಚಿವರಿಗೆ ಕೊಡುಗೆಯಾಗಿ ನೀಡಲಾಗುತ್ತದೆ”ಎಂದು ಹೇಳಿದರು.
“ಕಾರ್ಯಕ್ರಮದ ಅಂಗವಾಗಿ ಇಂಧನ ಸಂರಕ್ಷಣೆ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳಿಗಿರುವ ಆಸಕ್ತಿ ನಿಬ್ಬೆರಗು ಮೂಡಿಸಿತು. ಸರ್ಕಾರಿ ಶಾಲೆಯ ಮಕ್ಕಳಿಗಿರುವ ಶಿಸ್ತು, ಸೃಜನಶೀಲತೆ ಹಾಗೂ ಜಾಣ್ಮೆಗೆ ಸರಿಸಾಟಿ ಇಲ್ಲ. ಅವರ ಆಗಮನದಿಂದ ಇಡೀ ಕ್ರೆಡಲ್ ಕಚೇರಿ ಇಂದು ಕಳೆ ಕಟ್ಟಿದೆ. ಚಿತ್ರ ಸ್ಪರ್ಧೆಯಲ್ಲಿ ತೀರ್ಪುಗಾರರು ಆಯ್ಕೆ ಮಾಡಿದ ಅತ್ಯುತ್ತಮ ಚಿತ್ರಕ್ಕೆ ಮೊದಲ ಬಹುಮಾನವಾಗಿ 5 ಸಾವಿರ, ಎರಡನೇ ಬಹುಮಾನ 3ಸಾವಿರ, ಮೂರನೇ ಬಹುಮಾನವಾಗಿ 2 ಸಾವಿರ ಹಾಗೂ 7 ಸಮಾಧಾನಕರ ಚಿತ್ರಗಳಿಗೆ ತಲಾ 1 ಸಾವಿರ ನೀಡಲಾಯ್ತು. ಇಂಧನ ದಕ್ಷತೆಗಾಗಿ ಎಲ್‌ಇಡಿ ಬಲ್ಬ್ ಗಳನ್ನು ಬಳಸಬೇಕು ಎಂಬ ಸಂದೇಶ ಸಾರಲು ವಿದ್ಯಾರ್ಥಿಗಳಿಗೆ ಬಲ್ಬ್ ವಿತರಿಸಲಾಗಿದೆ”ಎಂದರು.
ಕೆಎಸ್‌ಪಿಡಿಸಿಎಲ್ ಸಿಇಓ ಅಮರನಾಥ್, ಕ್ರೆಡಲ್‌ನ ಪ್ರಧಾನ ವ್ಯವಸ್ಥಾಪಕರಾದ ಜಗದೀಶ ಬೆಳಗಲಿ, ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀನಾಥ್, ಕ್ರೆಡಲ್‌ನ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
"ಡಿಸೆಂಬರ್ 14 ರಿಂದ 20 ರವರೆಗೆ ಇಂಧನ ಸಂರಕ್ಷಣೆ ಸಪ್ತಾಹ ಆಚರಿಸಲಾಗುತ್ತದೆ. ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಕ್ರೆಡಲ್‌ನಲ್ಲಿ ಇಂದು ಸಂರಕ್ಷಣಾ ದಿನಾಚರಣೆ ಆಚರಿಸಲಾಗಿದೆ. ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಕುರಿತು ಅರಿವು ಮೂಡಿಸುವ ಅಭಿಯಾನ ಇದಾಗಿದ್ದು, ಶಾಲಾ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಮ್ಮ ಇಲಾಖೆ ವತಿಯಿಂದ ವಾಕಥಾನ್ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸ್ಪರ್ಧೆಗಳು ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗಿದೆ. ಈ ಮೂಲಕ ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಪ್ರೇರೇಪಿಸಲಾಗುತ್ತದೆ" - ಕೆ.ಜೆ. ಜಾರ್ಜ್, ಇಂಧನ ಸಚಿವರು