Homeಕರ್ನಾಟಕ4,618 ಕೆರೆಗಳ ಒತ್ತುವರಿ ತೆರವುಗೊಳಿಸಿ ಇಲಾಖೆಯ ವಶಕ್ಕೆ: ಸಚಿವ ಪ್ರಿಯಾಂಕ್‌ ಖರ್ಗೆ

4,618 ಕೆರೆಗಳ ಒತ್ತುವರಿ ತೆರವುಗೊಳಿಸಿ ಇಲಾಖೆಯ ವಶಕ್ಕೆ: ಸಚಿವ ಪ್ರಿಯಾಂಕ್‌ ಖರ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಾದ್ಯಂತ ಜಿಲ್ಲಾ ಪಂಚಾಯತಿಗಳ ಅಧೀನದಲ್ಲಿನ ಕೆರೆಗಳನ್ನು ಗುರುತಿಸುವ ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಗೆ ಬರುವ ಕೆರೆಗಳ ಸಮೀಕ್ಷೆ ಕಾರ್ಯವನ್ನು ಎಲ್ಲ ಜಿಲ್ಲೆಗಳಲ್ಲಿ ಕೈಗೊಂಡಿದ್ದು ಒತ್ತುವರಿಯಾಗಿದ್ದ 9140 ಕೆರೆಗಳನ್ನು ಈಗಾಗಲೆ ಗುರುತಿಸಲಾಗಿದ್ದು, ಈ ಪೈಕಿ 4618 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ.

ರಾಜ್ಯದ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿ 32648 ಕೆರೆಗಳಿದ್ದು, ಇಲಾಖೆ ಕೈಗೊಂಡಿರುವ ಸಮೀಕ್ಷೆಯಲ್ಲಿ 24497 ಕೆರೆಗಳನ್ನು ಗುರುತಿಸಲಾಗಿದೆ, ಇವುಗಳಲ್ಲಿ 9140 ಕೆರೆಗಳು ಒತ್ತುವರಿಗೊಂಡಿದ್ದವು ಎಂದು ತಿಳಿಸಿರುವ ಸಚಿವರು ಒತ್ತುವರಿಗೊಂಡ ಕೆರೆಗಳಲ್ಲಿ 4618 ಕೆರೆಗಳ ಒತ್ತುವರಿಯನ್ನು ತೆರೆವುಗೊಳಿಸಲಾಗಿದ್ದು, 8697 ಎಕರೆ ಭೂಮಿಯನ್ನು ಜಿಲ್ಲಾ ಪಂಚಾಯತಿಗಳ ವಶಕ್ಕೆ ಪಡೆದುಕೊಳ್ಳಲಾಗಿದೆ, ಒತ್ತುವರಿ ಗುರುತಿಸಲ್ಪಟ್ಟಿರುವ ಉಳಿದ 4522 ಕೆರೆಗಳನ್ನು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸಚಿವರು ವಿವರಗಳನ್ನು ನೀಡಿದ್ದಾರೆ.

ಒಟ್ಟಾರೆ 32648 ಕೆರೆಗಳಲ್ಲಿ ಸಮೀಕ್ಷೆ ಬಾಕಿ ಇರುವ 8151 ಕೆರೆಗಳ ಸಮೀಕ್ಷೆಯನ್ನು ಮುಂದಿನ 30 ದಿನಗಳ ಒಳಗೆ ಮುಗಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದು, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಸಮೀಕ್ಷೆ ಕಾರ್ಯವನ್ನು ಮುಗಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಗೆ ಬರುವ 32648 ಕೆರೆಗಳು 3,08,213 ಎಕರೆ ಪ್ರದೇಶವನ್ನು ಹೊಂದಿದೆ, ಇವುಗಳಲ್ಲಿ 2,15,594 ಎಕರೆಗೆ ಸಂಬಂಧಿಸಿದಂತೆ 24497 ಕೆರೆಗಳ ಸರ್ವೆ ಕಾರ್ಯ ಸಂಪನ್ನಗೊಂಡಿದೆ. ರಾಜ್ಯದಲ್ಲಿ ಹಾಸನ ಜಿಲ್ಲೆ ಅತಿ ಹೆಚ್ಚು 6367 ಕೆರೆಗಳನ್ನು ಹೊಂದಿದ್ದು, ಬಳ್ಳಾರಿ ಜಿಲ್ಲೆ ಅತಿ ಕಡಿನೆ 21 ಕೆರೆಗಳನ್ನು ಹೊಂದಿದೆ, ಹೆಚ್ಚು ಕೆರೆಗಳನ್ನು ಹೊಂದಿದ ಜಿಲ್ಲೆಗಳಲ್ಲಿ ಶಿವಮೊಗ್ಗ (4354) ಹಾಗೂ ಮೈಸೂರು (2805) ಎರಡು ಹಾಗೂ ಮೂರನೆ ಸ್ಥಾನಗಳಲ್ಲಿವೆ, ಹಾಗೆಯೇ ಅತಿ ಕಡಿಮೆ ಕೆರೆಗಳ ಮುಂದಿನ ಸ್ಥಾನಗಳು ಕಲಬುರಗಿ (33) ಮತ್ತು ಕೊಪ್ಪಳ (39) ಜಿಲ್ಲೆಗಳದು ಎಂಬ ಸಂಗತಿ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments