Homeಕರ್ನಾಟಕಡಿಸೆಂಬರ್ ವೇಳೆಗೆ 41, 849 ಕೆರೆಗಳ ಒತ್ತುವರಿ ತೆರವು: ಸಚಿವ ಎನ್ ಎಸ್ ಭೋಸರಾಜು

ಡಿಸೆಂಬರ್ ವೇಳೆಗೆ 41, 849 ಕೆರೆಗಳ ಒತ್ತುವರಿ ತೆರವು: ಸಚಿವ ಎನ್ ಎಸ್ ಭೋಸರಾಜು

ಡಿಸೆಂಬರ್ ಅಂತ್ಯದೊಳಗೆ 41, 849 ಕೆರೆಗಳ ಒತ್ತುವರಿ ತೆರವುಗೊಳಿಸಿ ನೀರು ತುಂಬಿಸುವ ಕೆಲಸ ಮಾಡುವ ಮೂಲಕ ಅಂತರ್ಜಲ ವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಹೇಳಿದ್ದಾರೆ.

ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ “ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್: ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 35 ಸಾವಿರಕ್ಕೂ ಅಧಿಕ ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ.

ಎಚ್.ಎನ್. ವ್ಯಾಲಿ, ಕೆ.ಸಿ. ವ್ಯಾಲಿ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಅಂತರ್ಜಲ ವೃದ್ಧಿಯಾಗಿದೆ. ಇದೀಗ ಪ್ರತಿ ವರ್ಷ 1018 ಕೆರೆಗಳಿಗೆ ನೀರು ತುಂಬಿಸುತ್ತಿದ್ದು, 25 ಲಕ್ಷ ಎಕರೆಗೆ ಸಣ್ಣ ನೀರಾವರಿ ಇಲಾಖೆಯಿಂದ ನೀರು ಪೂರೈಸಲಾಗುತ್ತಿದೆ. ಜೊತೆಗೆ ಎಲ್ಲಾ ಕೆರೆಗಳನ್ನು ಸೊಸೈಟಿಗಳ ಮೂಲಕ ಪುನರುಜ್ಜೀವನಗೊಳಿಸಲಾಗಿದೆ. ಅಂತರ್ಜಲ ಸುಧಾರಣೆಗೆ ಒತ್ತು ನೀಡುತ್ತಿದ್ದೇವೆ ಎಂದರು.

ಅಂತರ್ಜಲ ಇಲಾಖೆ ಮೂಲಕ ರಾಜ್ಯದ 2714 ಪ್ರದೇಶಗಳಲ್ಲಿ ಪ್ರತಿ ಆರು ಗಂಟೆಗೊಮ್ಮೆ ಅಂತರ್ಜಲದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಶೇ 60 ರಷ್ಟು ಕೃಷಿ ಚಟುವಟಿಕೆ ಕೊಳವೆ ಬಾವಿ ಮೂಲಕ ನಡೆಯುತ್ತಿದೆ. ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ ಬರಗಾಲ ಪರಿಸ್ಥಿತಿ ಎದುರಾಗುತ್ತಿದ್ದು, ಪ್ರಾಕೃತಿಕ ವಿಕೋಪದ ಸಮಸ್ಯೆ ತೀವ್ರವಾಗಿದೆ. ಮಳೆಯಾಶ್ರಿತ ಕೃಷಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಂತರ್ಜಲ ಬಳಕೆಯಲ್ಲಿ 10 ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಅಂತರ್ಜಲ ಪ್ರಮಾಣ ಸರಿಪಡಿಸದಿದ್ದರೆ ಬರುವ ದಿನಗಳಲ್ಲಿ ನಾವು ಸಂಕಷ್ಟಕ್ಕೆ ಸಿಲುಕುತ್ತೇವೆ. 44 ತಾಲ್ಲೂಕುಗಳಲ್ಲಿ ಅಂತರ್ಜಲ ಅತಿಯಾಗಿ ದುರ್ಬಳಕೆಯಾಗುತ್ತಿದೆ. ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ 8 ಸಾವಿರಕ್ಕೂ ಅಧಿಕ ಸಣ್ಣ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಅಂತರ್ಜಲ ಹೆಚ್ಚಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೀಗ ನೀರಿನ ಗ್ಯಾರೆಂಟಿ ಕೊಡುವುದು ಅತ್ಯಂತ ಅಗತ್ಯವಾಗಿದೆ. ಯಾರ ಕಣ್ಣಿಂದ ನೀರು ಬರುವುದಿಲ್ಲ ಅಂತಹವರು ಹಣದ ಬಗ್ಗೆ ವಿಚಾರ ಮಾಡುತ್ತಾರೆ. ಕಣ್ಣಲ್ಲಿ ನೀರು ಬಂದವರು ರೈತರ ಬಗ್ಗೆ ಆಲೋಚಿಸುತ್ತಾರೆ. ಆದರೆ ನಮ್ಮ ಸರ್ಕಾರ ರೈತರ ಶ್ರೇಯೋಭಿವೃದ್ದಿಗೆ ಒತ್ತು ನೀಡುತ್ತಿದೆ. ಸಚಿವ ಎಸ್.ಎನ್. ಬೋಸರಾಜು ಸಣ್ಣ ನೀರಾವರಿ ಇಲಾಖೆಗೆ ವಿಶೇಷ ಆದ್ಯತೆ ನೀಡಿದ್ದು, ರಾಜ್ಯವನ್ನು ಜಲ ಸಂಪದ್ಭರಿತಗೊಳಿಸಲು ಮುಂದಾಗಿದ್ಧಾರೆ ಎಂದು ಹೇಳಿದರು.

ವಾಟರ್ ಮ್ಯಾನ್ ಅಪ್ ಇಂಡಿಯಾ, ಜಲಸಂರಕ್ಷಣೆ ತಂತ್ರಜ್ಞರಾದ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕತ ರಾಜೇಂದ್ರ ಸಿಂಗ್ ಮಾತನಾಡಿ, ತಾವು ಚೆಂಬಲ್ ಕಣಿವೆಯಲ್ಲಿ ಜಲ ಸಂರಕ್ಷಣೆಗೆ ಒತ್ತು ನೀಡಿದ್ದು, ಅಲ್ಲಿ ಡಕಾಯಿತರು ಬಂದೂಕು ತೊರೆದು ಚಳವಳಿಯ ಭಾಗವಾಗಿದ್ದಾರೆ. ರಾಜ್ಯದಲ್ಲಿ ವಿಕೇಂದ್ರೀಕೃತವಾಗಿ ಅಂತರ್ಜಲ ಅಭಿವೃದ್ದಿಗೆ ಒತ್ತು ನೀಡಬೇಕಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯ ರಾಯಭಾರಿ, ನಟ ವಶಿಷ್ಟ ಸಿಂಹ ಮಾತನಾಡಿ, ಪ್ರಸ್ತುತ ಕುಡಿಯುವ ಮತ್ತು ಗೃಹ ಬಳಕೆಗೆ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಇದೆ. ಊರಿನಲ್ಲಿ ಒಂದು ಕೆರೆ ಇದ್ದರೆ ಆ ಊರು ಬೆಳವಣಿಗೆ ಸಾಧಿಸುತ್ತದೆ. ನೀರಿನ ಬಗ್ಗೆ ನಿಷ್ಕಾಳಜಿ ತೋರಿದ ಪರಿಣಾಮ ನಾವು ಅಭಾವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಮುಂಬರುವ ಪೀಳಿಗೆಗೆ ಆಸ್ತಿಯಲ್ಲ, ನೀರಿನ ಸಂರಕ್ಷಣೆಯ ಮೂಲಕ ಮಹತ್ವದ ಕೊಡುಗೆ ನೀಡಬೇಕಾಗಿದೆ ಎಂಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯೋಜನೆ ಉದ್ಘಾಟಿಸಿದರು. ಸಚಿವರಾದ, ಈಶ್ವರ್ ಖಂಡ್ರೆ, ಹೆಚ್.ಸಿ. ಮಹದೇವಪ್ಪ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಅಜಯ್ ಸಿಂಗ್, ರಿಜ್ವಾನ್ ಅರ್ಷದ್, ಎಂ.ವೈ ಪಾಟೀಲ್, ಎ ಆರ್ ಕೃಷ್ಣಮೂರ್ತಿ, ಹಂಪಯ್ಯ ನಾಯಕ್, ಭಾಗೀರಥಿ ಮುರುಳ್ಯ, ಬಸನಗೌಡ ತುರುವಿಹಾಳ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments