ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಹಜ್ ಭವನದಲ್ಲಿ ಆಯೋಜಿಸಲಾಗಿದ್ದ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, “ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ನೀಡುತ್ತಿದ್ದ ಅನುದಾನ ಕಡಿತ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ 3,200 ಕೋಟಿ ರೂ. ಒದಗಿಸಲಾಯಿತು” ಎಂದರು.
“ಈ ಪೈಕಿ 1,480 ಕೋಟಿ ರೂ. ಶಿಕ್ಷಣ ಕ್ಕೆ ವೆಚ್ಚ ಮಾಡಲಾಗುತ್ತಿದೆ. ಇದರಿಂದ ಸಮುದಾಯದ ಲಕ್ಷಾಂತರ ಮಕ್ಕಳು ವೈದ್ಯಕೀಯ, ಎಂಜಿನಿಯರರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ಸಹಕಾರಿ ಆಗಿದೆ. ವಿದೇಶದಲ್ಲಿ ವ್ಯಾಸಂಗಕ್ಕೆ ಹೋಗುವಂತಾಗಿದೆ. ಐಎಎಸ್ -ಐಪಿಎಸ್ ತರಬೇತಿ ಪಡೆಯುವಂತಾಗಿದೆ. ಕಾಂಗ್ರೆಸ್ ಅಧಿಕಾರ ದಲ್ಲಿದ್ದಾಗ ಮಾತ್ರ ಇದು ಸಾಧ್ಯವಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಬೇಕು” ಎಂದು ತಿಳಿಸಿದರು.
“ಕೆಎಂಡಿಸಿ ಯಿಂದ ಶಿಕ್ಷಣ ಹಾಗೂ ಸ್ವಾವಲಂಬಿ ಜೀವನ ನಡೆಸಲು ಸಾಕಷ್ಟು ಯೋಜನೆ ರೂಪಿಸಲಾಗಿದೆ. ಬಿಕೆ ಅಲ್ತಾಫ್ ಖಾನ್ ಅವರು ಅಧ್ಯಕ್ಷ ರಾದ ನಂತರ ಬದ್ಧತೆ ಯಿಂದ ಬದಲಾವಣೆ ತಂದಿದ್ದಾರೆ ಎಂದು ಶ್ಲಾಘನೆ ಮಾಡಿದರು. ವಕ್ಫ್ ಬೋರ್ಡ್‌ನಲ್ಲೂ ಅನ್ವರ್ ಬಾಷಾ ಅಧ್ಯಕ್ಷರಾಗಿ ನನಗೆ ಉತ್ತಮ ಸಹಕಾರ ಕೊಡುತ್ತಿರುವುದರಿಂದ ವಕ್ಫ್ ಆಸ್ತಿ ಸಂರಕ್ಷಣೆ ಕಾರ್ಯ ಮಾಡಲಾಗುತ್ತಿದೆ” ಎಂದು ಹೇಳಿದರು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, “ಜಮೀರ್ ಅಹಮದ್ ಖಾನ್ ಸಮುದಾಯದ ನಾಯಕನಾಗಿ ಹೊರ ಹೊಮ್ಮಿ ಎಲ್ಲರನ್ನೂ ಜತೆಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಮುದಾಯ ಒಟ್ಟಿಗೆ ಇದ್ದರೆ ಅದೇ ಶಕ್ತಿ” ಎಂದು ಹೇಳಿದರು.
ಮೌಲಾನಾ ಮಕ್ಸುದ್ ಇಮ್ರಾನ್, ಸಚಿವ ರಹೀಮ್ ಖಾನ್, ಮಾಜಿ ಸಚಿವ ಹಿಂಡಸಗೇರಿ ಶಾಸಕ ರಾದ ಇಕ್ಬಾಲ್ ಹುಸೇನ್, ಅಬ್ದುಲ್ ಜಬ್ಬಾರ್, ಐ ವಾನ್ ಡಿಸೋಜ,ಬಿಲ್ಕಿಸ್ ಬಾನು, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ,
ಕೆ ಎಂ ಡಿಸಿ ಅಧ್ಯಕ್ಷ ಬಿಕೆ ಅಲ್ತಾಫ್ ಖಾನ್, ಎಂಡಿ ಮೊಹಮ್ಮದ್ ನಜೀರ್, ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಶಿ ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ 177 ಆಟೋ ರಿಕ್ಷಾ 68 ಟ್ಯಾಕ್ಸಿ, 30 ಗೂಡ್ಸ್ ವಾಹನ ಸೇರಿ 579 ಮಂದಿಗೆ 7.86 ಕೋಟಿ ರೂ. ಮೊತ್ತದ ಸವಲತ್ತು ವಿತರಿಸಲಾಯಿತು.