ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ಹೆಸರೇಳುವಂತೆ ಇ.ಡಿ ಅಧಿಕಾರಿಗಳು ಒತ್ತಡ ಹಾಕಿ, ಮಾನಸಿಕವಾಗಿ ಹಿಂಸೆ ನೀಡುವ ಮೂಲಕ ಕಿರುಕುಳ ಕೊಡಿತ್ತಿದ್ದಾರೆ ಎಂದು ಆರೋಪಿಸಿ ನಿಗಮದ ಹಿಂದಿನ ಎಂಡಿ ಕಲ್ಲೇಶ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಇ.ಡಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿರುವ ಕಲ್ಲೇಶ್, ವಿಚಾರಣೆಗೆ ಹಾಜರಾಗುವಂತೆ ಇ.ಡಿಯವರು ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದು, ಅದರಂತೆ ನಾನು ಶಾಂತಿನಗರದ ಜಾರಿ ನಿರ್ದೇಶನಾಲಯ ಕಚೇರಿಗೆ ಹೋಗಿದ್ದೆ. ನನ್ನ ಹೇಳಿಕೆಯನ್ನು ಇ.ಡಿ ಅಧಿಕಾರಿ ಮುರುಳಿ ಕಣ್ಣನ್ ದಾಖಲಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ಮಾಜಿ ಸಚಿವ ನಾಗೇಂದ್ರ ಅವರ ಹೆಸರು ಹೇಳದಿದ್ದರೆ ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ. ಎರಡು ವರ್ಷ ಆದರೂ ನಿಮಗೆ ಬೆಲ್ ಸಿಗುವುದಿಲ್ಲ ಎಂದು ಹೆದರಿಸುತ್ತಾರೆ” ಎಂದು ಕಲ್ಲೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನಗೆ 17 ಪ್ರಶ್ನೆಗಳನ್ನು ಕೇಳುತ್ತಾರೆ. ನಾನು 17 ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ. ಅದರಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತ (ಫೈಲ್)ಬೇಕು ಹಾಗು ನನ್ನ ಕೆಳಹಂತದ ಅಧಿಕಾರಿಗಳು ಬೇಕಾಗುತ್ತಾರೆಂದು ತಿಳಿಸಿರುತ್ತೇನೆ. ಆಗ ಕಣ್ಣನ್ ರವರು ವಿಚಾರಣೆ ಮುಗಿದು ನನ್ನ ಕಡೆಯಿಂದ ನನ್ನ ಹೇಳಿಕೆಗೆ ಸಹಿ ಪಡಿಯುತ್ತಾರೆ. ನಾನು ನನ್ನ ಹೇಳಿಕೆಯ ಪ್ರತಿಯನ್ನು ನನಗೊಂದು ಕೊಡಿ ಎಂದು ಕೇಳುತ್ತೇನೆ. ಆದರೆ ಸದರಿಯವರು ಕೊಡಲಿಲ್ಲ” ಎಂದಿದ್ದಾರೆ.
“ನೀವು ಎಂ.ಜಿ ರೋಡ್ ಖಾತೆಗೆ ಅನುದಾನ ಜಮಾ ಮಾಡಲು ಮಾಜಿ ಮಂತ್ರಿ ನಾಗೇಂದ್ರ, ಸರ್ಕಾರದ ಹೊಯಷ್ಟ ಅಥಾರಿಟಿ ಮತ್ತು ಎಫ್.ಡಿ ಇಲಾಖೆಯಿಂದ ಸೂಚನೆ ಇತ್ತು ಎಂದು ಒಪ್ಪಿಕೊಂಡಲ್ಲಿ ನಿಮ್ಮನ್ನು ಬಿಡುತ್ತೇವೆ. ಇಲ್ಲದಿದ್ದರೆ ಅರೆಸ್ಟ್ ಮಾಡುತ್ತೇವೆಂದು ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ” ಎಂದು ದೂರಿನಲ್ಲಿ ಹೇಳಿದ್ದಾರೆ.