Homeಕರ್ನಾಟಕಮುಡಾ ಕಚೇರಿ ಮೇಲೆ ಇ.ಡಿ ದಾಳಿ | ಆರ್‌ ಅಶೋಕ್‌ ಮತ್ತು ವಿಜಯೇಂದ್ರ ಹೇಳಿದ್ದೇನು?

ಮುಡಾ ಕಚೇರಿ ಮೇಲೆ ಇ.ಡಿ ದಾಳಿ | ಆರ್‌ ಅಶೋಕ್‌ ಮತ್ತು ವಿಜಯೇಂದ್ರ ಹೇಳಿದ್ದೇನು?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮದ ಬಗ್ಗೆ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಶುಕ್ರವಾರ (ಅ.18) ಮುಡಾ ಕಚೇರಿ ಮೇಲೆ ದಾಳಿ ನಡೆಸಿದೆ.

ಮುಡಾ ಕಚೇರಿ, ಮೈಸೂರು ನಗರ ತಾಲ್ಲೂಕು ಕಚೇರಿ, ಜಮೀನು ಮಾಲೀಕ ಹಾಗೂ ನಿವೇಶನ ಹಂಚಿಕೆ ಅಕ್ರಮದ ಆರೋಪಿಯಾಗಿರುವ ದೇವರಾಜು ನಿವಾಸದ ಮೇಲೂ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿ, ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಮುಡಾ ಅಕ್ರಮದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇ.ಡಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, 20ಕ್ಕೂ ಹೆಚ್ಚು ಸಿಆರ್‌ಪಿಎಫ್ ಭಧ್ರತಾ ಸಿಬ್ಬಂದಿಯೊಂದಿಗೆ ಮುಡಾ ಕಚೇರಿಗೆ ಬಂದಿರುವ ಇ.ಡಿ ಅಧಿಕಾರಿಗಳ ತಂಡ ಮುಡಾ ಆಯುಕ್ತರಿಂದ ಮಾಹಿತಿಗಳನ್ನು ಕಲೆಹಾಕಿ ದಾಖಲೆಗಳನ್ನು ಪಡೆಯುತ್ತಿದೆ.

ಹಗರಣದ ಬಗ್ಗೆ ದಾಖಲೆಗಳನ್ನು ನೀಡುವಂತೆ ಇ.ಡಿ ಈಗಾಗಲೇ ಮೂರು ನೋಟಿಸ್ ಹಾಗೂ 1 ಸಮನ್ಸ್ ಜಾರಿ ಮಾಡಿತ್ತು.ಆದರೆ, ಇ.ಡಿ ನೋಟಿಸ್, ಸಮನ್ಸ್‌ಗೆ ಅಧಿಕಾರಿಗಳು ಯಾವುದೇ ಉತ್ತರ ನೀಡಿರಲಿಲ್ಲ ಎಂಬ ಕಾರಣಕ್ಕೆ ಇ.ಡಿ ದಾಳಿ ನಡೆದಿದೆ ಎನ್ನಲಾಗಿದೆ. ಇ.ಡಿ ದಾಳಿ ಹಿನ್ನೆಲೆಯಲ್ಲಿ ಮುಡಾ ಕಚೇರಿಗೆ ಬೀಗ ಹಾಕಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಕಚೇರಿ ಕೆಲಸಕ್ಕೆ ಬಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಇ.ಡಿ ದಾಳಿ ರಾಜಕೀಯ ಪ್ರೇರಿತ ಅಲ್ಲ: ಆರ್‌ ಅಶೋಕ್

“ಮುಡಾ ಕಚೇರಿ ಮೇಲೆ ಇ.ಡಿ ದಾಳಿ ರಾಜಕೀಯ ಪ್ರೇರಿತ ಅಲ್ಲ, ಈ ದಾಳಿಯ ಹಿಂದೆ ಕೇಂದ್ರ ಸರ್ಕಾರವಾಗಲಿ ಬಿಜೆಪಿಯಾಗಲಿ ಇಲ್ಲ” ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಡಾ ಅಕ್ರಮದ ಬಗ್ಗೆ ಸ್ನೇಹಮಯಿ ಕೃಷ್ಣಾ ಎನ್ನುವವರು ಇಡಿಗೆ ದೂರು ನೀಡಿದ್ದರು. ಹಾಗೆಯೇ, ಇಲ್ಲಿ ಅಕ್ರಮ ನಡೆದಿರುವ ಬಗ್ಗೆ ಮುಡಾ ಅಧ್ಯಕ್ಷರಾಗಿದ್ದ ಮರೀಗೌಡ ಅವರು ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಕೋರಿದ್ದರು. ದೂರುಗಳ ಹಿನ್ನೆಲೆಯಲ್ಲಿ ಇ.ಡಿ ದಾಳಿ ನಡೆಸಿ ತನಿಖೆ ನಡೆಸುತ್ತಿದೆ” ಎಂದರು.

ವಿಜಯೇಂದ್ರ ಹೇಳಿದ್ದೇನು?

“ಬಿಜೆಪಿ ಮೊದಲಿನಿಂದಲೂ ಪ್ರತಿಪಾದಿಸುತ್ತಿರುವುದು ಸಿಬಿಐ ಹಾಗೂ ಇ.ಡಿ ತನಿಖೆಯನ್ನು, ಏಕೆಂದರೆ ಮುಡಾ ಹಗರಣ ಈ ರಾಜ್ಯವನ್ನು ಆಳುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮುಷ್ಟಿಯಲ್ಲಿರುವ ಯಾವ ತನಿಖಾ ಸಂಸ್ಥೆಯಿಂದಲೂ ನ್ಯಾಯ ಸಿಗುವುದಿಲ್ಲ ಎನ್ನುವುದನ್ನು ಈಗಾಗಲೇ ಕಾನೂನು ಪಂಡಿತರು ಹಾಗೂ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ತೀವ್ರಗೊಳಿಸಿರುವ ಇ.ಡಿ ತನಿಖೆಯಿಂದ ಹಗರಣದ ಊರಣ ಬಯಲಾಗುತ್ತದೆ, ತಪ್ಪಿತಸ್ತರೆಲ್ಲರಿಗೂ ಶಿಕ್ಷೆಯಾಗುತ್ತದೆ ಎಂಬ ನಿರೀಕ್ಷೆ ಮೂಡಿದೆ. ಈಗಲೂ ಮುಖ್ಯಮಂತ್ರಿಗಳು ಕರ್ನಾಟಕದ ಸಾರ್ವಭೌಮತ್ವದ ಸಂಕೇತವಾದ ಮುಖ್ಯಮಂತ್ರಿಯ ಸ್ಥಾನದಲ್ಲಿ ಮುಂದುವರೆದರೆ ಆ ಸ್ಥಾನದ ಗೌರವಕ್ಕೆ ಕಪ್ಪುಮಸಿ ಬಳಿದ ಇತಿಹಾಸ ಶಾಶ್ವತವಾಗಿ ಕರ್ನಾಟಕದ ಚರಿತ್ರೆಯಲ್ಲಿ ಉಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಎಕ್ಸ್‌ ತಾಣದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments