ಆಪ್ಟಿಕಲ್ ಫೈಬರ್ ಕೇಬಲ್ ಬಳಸಿ ಡಿಜಿಟಲ್ ಸೇವೆಗಳು ಮತ್ತು ಆರ್ಥಿಕ ಅವಕಾಶಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಮೂಲಕ ದೂರಸಂಪರ್ಕ ಆಧಾರಿತ ಸಮೃದ್ಧ ಗ್ರಾಮ ಪಂಚಾಯತ್ ಯೋಜನೆಯನ್ನು ಜಾರಿಗೊಳಿಸಲು ರಾಜ್ಯದಲ್ಲಿ 205 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪರಿವರ್ತನೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಮೃದ್ಧ್ ಗ್ರಾಮ ಪಂಚಾಯತ್ ಯೋಜನೆ ಉತ್ತೇಜನ ನೀಡುತ್ತದೆ ಹಾಗೂ ಗ್ರಾಮಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಗ್ರಾಮೀಣ ಸಮುದಾಯಗಳು, ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ಮತ್ತು ಗ್ರಾಮ ಮಟ್ಟದ ಉದ್ಯಮಿಗಳು/ಸಂಸ್ಥೆಗಳಿಗೆ ಹೆಚ್ಚಿನ ವೇಗದ ಬ್ರಾಡ್ಬ್ಯಾಂಡ್ (FTTH) ಸಂಪರ್ಕದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಗ್ರಾಮಗಳಲ್ಲಿ ಫೈಬರ್ ಸಂಪರ್ಕದ ಸಮರ್ಥ ಬಳಕೆಗಾಗಿ ತಾಂತ್ರಿಕ ತಜ್ಞರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯತ್ ಡಿಜಿಟಲ್ ಅಕ್ಸೆಸ್ ಸಮಿತಿ(DAC)ಗಳನ್ನು ರಚಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷರು ಅಥವಾ ಚುನಾಯಿತ ಪ್ರತಿನಿಧಿ ಇಲ್ಲದಿದ್ದ ಪಕ್ಷದಲ್ಲಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದ್ದು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ ಹಾಗೂ ಸಮಿತಿಯಲ್ಲಿ 4 ಮಂದಿ ಸದಸ್ಯರಿರುತ್ತಾರೆ. ಸಮಿತಿ ಸಲಹಾತ್ಮಕ ಸಮಿತಿಯಾಗಿದ್ದು, ಕೆಳಗಿನಂತೆ ಸಮಿತಿಗಳು ಜವಾಬ್ದಾರಿಗಳನ್ನು ನಿರ್ವಹಿಸಲಿವೆ ಎಂದು ಸಚಿವರು ಹೇಳಿದ್ದಾರೆ.
ಗ್ರಾಮೀಣ ಸಮುದಾಯಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಹಾಗೂ ಗ್ರಾಮ ಮಟ್ಟದ ಉದ್ಯಮಿಗಳು/ಸಂಸ್ಥೆಗಳಿಗೆ ಹೆಚ್ಚಿನ ವೇಗದ ಬ್ರಾಡ್ಬ್ಯಾಂಡ್ ಸಂಪರ್ಕದ ಪ್ರಯೋಜನಗಳು ಹಾಗೂ ಗ್ರಾಮಗಳ ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲಿ ಇದರ ಪಾತ್ರದ ಕುರಿತು ಅರಿವು ಮೂಡಿಸುವುದು ಹಾಗೂ ಬ್ರಾಡ್ಬ್ಯಾಂಡ್ ವಿಸ್ತರಣೆ ಹಾಗೂ ಡಿಜಿಟಲ್ ಲಭ್ಯತೆಯನ್ನು ಸುಧಾರಿಸುವತ್ತ ಕಾರ್ಯನಿರ್ವಹಿಸುವುದು. ಹಳ್ಳಿಗಳಲ್ಲಿ ಹೆಚ್ಚಿನ ವೇಗದ ಬ್ರಾಡ್ಬ್ಯಾಂಡ್ ಮೂಲಕ ಒದಗಿಸಬಹುದಾದ ಸೇವೆಗಳು ಮತ್ತು ಬಳಕೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನ್ವೇಷಣೆ ಮಾಡುವುದು, ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಐಸಿಟಿ ಉಪಕರಣಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದು ಸೇರಿದಂತೆ ಸಂಬಂಧಿಸಿದ ಮತ್ತಿತರ ಹೊಣೆಯನ್ನು ಸಮಿತಿಗಳಿಗೆ ನಿಡಲಾಗಿದೆ.
ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಡಿಜಿಟಲ್ ಅಕ್ಸೆಸ್ ಸಮಿತಿ ರಚನೆಯಾಗಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದೂ ಸಚಿವರು ಸೂಚನೆ ನಿಡಿದ್ದಾರೆ.