Homeಕರ್ನಾಟಕಬರ ಪರಿಹಾರ : ಕಟುಕರಾಗಬೇಡಿ, ಮಾತೃ ಹೃದಯದಿಂದ ವರ್ತಿಸಿ: ಆರ್‌ ಅಶೋಕ

ಬರ ಪರಿಹಾರ : ಕಟುಕರಾಗಬೇಡಿ, ಮಾತೃ ಹೃದಯದಿಂದ ವರ್ತಿಸಿ: ಆರ್‌ ಅಶೋಕ

ಬೆಳಗಾವಿ: ಬರ ಪರಿಹಾರ ನೆರವು ಬಿಡುಗಡೆ ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡಿ ಕಾಲಾಹರಣ ಮಾಡುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರಕಾರ ದಿವಾಳಿ ಆಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.

ವಿಧಾನಸಭೆಯಲ್ಲಿ ಬರಗಾಲ ಕುರಿತ ವಿಶೇಷ ಚೆರ್ಚೆ ಮುಂದುವರಿಸಿ ಗುರುವಾರ ಮಾತನಾಡಿದ ಅವರು, “ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ” ಆಗ್ರಹಿಸಿದರು.

“ಬರಗಾಲದಿಂದ ಕಂಗಾಲಾಗಿರುವ ರೈತ ಸಮುದಾಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಬೆಳೆಗಾರರ ಎರಡು ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಬೇಕು, ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ ಪರಮಾಧಿಕಾರ ನೀಡಿ ಪ್ರತಿ ತಾಲ್ಲೂಕಿಗೆ ಐದು ಕೋಟಿ ರೂ. ನೀಡಬೇಕು, ಸ್ಥಗಿತಗೊಳಿಸಿರುವ ವಿದ್ಯಾನಿಧಿ ಯೋಜನೆ ಮತ್ತೆ ಆರಂಭಿಸಬೇಕು, ಕುಡಿಯುವ ನೀರು, ಮೇವು ಖರೀದಿ, ಗೋಶಾಲೆ ಆರಂಭಿಸಲು ಅನುದಾನ ನಿಗದಿ ಮಾಡಿ ಆದೇಶಗಳನ್ನು ತಕ್ಷಣವೇ ಹೊರಡಿಸಬೇಕು” ಎಂದು ಒತ್ತಾಯಿಸಿದರು.

“ಕೇಂದ್ರ ನೆರವಿನ ಕಿಸಾನ್ ಸನ್ಮಾನ್ ಯೋಜನೆಗೆ ಕೇಂದ್ರದ ಆರು ಸಾವಿರಕ್ಕೆ ನಮ್ಮ ಸರಕಾರ ನಾಲ್ಕು ಸಾವಿರ ಸೇರಿಸಿ ಹತ್ತು ಸಾವಿರ ರೂ. ನೀಡುತ್ತಿತ್ತು. ಅದನ್ನು ಮತ್ತೆ ಆರಂಭಿಸಬೇಕು. ಬರಗಾಲದ ವೇಳೆ ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು, ಜಾನುವಾರುಗಳಿಗೆ ಬರಗಾಲದಲ್ಲಿ ಬರಬಹುದಾದ ಕಾಯಿಲೆಗಳಿಂದ ರಕ್ಷಿಸಲು ಲಸಿಕೆ ಹಾಕಬೇಕು, ಬಡವರು, ಕೃಷಿ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ನಮ್ಮ ಸರಕಾರ ವಿತರಿಸಿದ್ದಂತೆ ಆಹಾರ ಕಿಟ್ ವಿತರಿಸಬೇಕು” ಎಂದರು.

“ಪದೇ ಪದೇ ಕೇಂದ್ರದ ಕಡೆ ಬೊಟ್ಟು ಮಾಡದೆ ನಮ್ಮ ಸರಕಾರದ ಅವಧಿಯಲ್ಲಿ ನೀಡಿದ್ದಂತೆ ಮಳೆ ಆಶ್ರಿತ, ನೀರಾವರಿ ಮತ್ತು ಬಹು ವಾರ್ಷಿಕ ಬೆಳೆಗಳಿಗೆ ದುಪ್ಪಟ್ಟು ಪರಿಹಾರ ವಿತರಿಸಬೇಕು. ನಮ್ಮ ಕಾಲದಲ್ಲಿ ಮೇ ತಿಂಗಳಲ್ಲಿ ನೆರೆ ಬಂದಾಗ ಜುಲೈನಲ್ಲಿ ಪರಿಹಾರ ಕೊಟ್ಟಿದ್ವಿ. ಒಂದೇ ತಿಂಗಳಲ್ಲಿ ನಾವು ಪರಿಹಾರ ನೀಡಿರುವಾಗ ನೀವು ಕೊಡಲು ಏನು ದಾಡಿ” ಎಂದು ಪ್ರಶ್ನಿಸಿದರು.

“ನಿಮಗೆ ತೆಲಂಗಾಣ ಚುನಾವಣೆಯಲ್ಲಿ ಇರುವ ಆಸಕ್ತಿ ಬರಪರಿಸ್ಥಿತಿ ನಿಭಾಯಿಸುವ ವಿಷಯದಲ್ಲಿ ಇಲ್ಲ. ಅನೇಕ ಸಚಿವರು ಇನ್ನೂ ಹೈದರಾಬಾದ್ ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಹದಿನಾಲ್ಕು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಪರಿಸ್ಥಿತಿ ಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ನಮ್ಮ ನಿರೀಕ್ಷೆ ತಲೆಕೆಳಗಾಗಿದೆ” ಎಂದು ವಾಗ್ದಾಳಿ ನಡೆಸಿದರು.

“ತಾಲ್ಲೂಕುವಾರು ಪರಿಹಾರಕ್ಕೆ ಎಷ್ಟು ಹಣ ಬಿಡುಗಡೆ ಮಾಡುತ್ತೀರಿ? ಅದನ್ನು ಯಾವುದಕ್ಕೆ ಬಳಸಬೇಕು? ಅದಕ್ಕೆ ಸಂಬಂಧಿಸಿದ ಆದೇಶಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ರಾಜ್ಯದ ಜನತೆ ಸಂಕಷ್ಟದ ಸಮಯದಲ್ಲಿ ಇರುವಾಗ ನೀವು ಸ್ಪಂದಿಸದಿದ್ದರೆ ಅವರ ಶಾಪ ನಿಮಗೆ ತಟ್ಟುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಿ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments