ಕೇಂದ್ರ ಸರ್ಕಾರ ಬರ ಪರಿಹಾರ ನೀಡುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಭಾನುವಾರ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿವರಾದ ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಎನ್. ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಕೆ. ಎಚ್. ಮುನಿಯಪ್ಪ, ಶಾಸಕರಾದ ಎಚ್. ಸಿ. ಬಾಲಕೃಷ್ಣ, ರಿಜ್ವಾನ್ ಅರ್ಷದ್ ಮತ್ತಿತರರು ಭಾಗವಹಿಸಿದರು.
“ಎನ್ ಡಿ ಆರ್ ಎಫ್ ನಿಯಮವಾಳಿ ಪ್ರಕಾರ ರಾಜ್ಯಕ್ಕೆ ₹18,171 ಕೋಟಿ ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ ₹ 3,498 ಕೋಟಿಗೆ ಅನುಮೋದನೆ ನೀಡಿ, ₹ 3,454 ಕೋಟಿ ಬಿಡುಗಡೆ ಮಾಡಿದೆ. ಬರ ಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
“ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು 2023ರ ಸೆ. 13ರಂದೇ ಘೋಷಿಸಲಾಗಿದೆ. ಈಗ ಏಳು ತಿಂಗಳುಗಳಾಗುತ್ತಾ ಬಂತು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ ₹ 35,162 ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ಪರಿಹಾರ ಕೇಳಿರುವುದು ಹೆಚ್ಚು ಕಡಿಮೆ ಅದರ ಅರ್ಧದಷ್ಟು ಅಂದರೆ ₹ 18,171 ಕೋಟಿ. ಉಳಿದ ಹಣವನ್ನು ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದಲೆ ಭರಿಸುತ್ತಿದೆ. ಈಗ ಬಿಡುಗಡೆಯಾಗಿರುವುದು ₹ 3,454 ಕೋಟಿ ಮಾತ್ರ. ಉಳಿದ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.