ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರಿಗೆ ಮನವಿ ಸಲ್ಲಿಸಿತು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆರ್ ಅಶೋಕ, “ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಒಂದು, ಎರಡು ತಿಂಗಳಲ್ಲಿ ರೈತರಿಗೆ ಪ್ರವಾಹ ಹಾನಿ ಪರಿಹಾರ ವಿತರಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಕೂಡಲೇ ಪರಿಹಾರ ವಿತರಿಸಲಿ, ಇಲ್ಲವಾದರೆ ಎಲ್ಲರೂ ರಾಜೀನಾಮೆ ನೀಡಲಿ” ಆಗ್ರಹಿಸಿದರು.
“ಸುಮಾರು 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಕಡೆಗೆ ಸರ್ಕಾರ ತಿರುಗಿಯೂ ನೋಡುತ್ತಿಲ್ಲ. ಅಧಿಕಾರಿಗಳು ಸಾಂತ್ವನ ಹೇಳಿಲ್ಲ, ಸಚಿವರು ಕೂಡ ರೈತರ ಬಳಿ ಹೋಗಿಲ್ಲ. ಉತ್ತರ ಕರ್ನಾಟಕದಲ್ಲಿ ವಲಸೆ ಆರಂಭವಾಗಿದೆ. ಬರಗಾಲ ಶುರುವಾಗಿ ಐದು ತಿಂಗಳಾದರೂ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ. ಎರಡು ಸಾವಿರ ರೂಪಾಯಿ ಪರಿಹಾರ ನೀಡುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಇದುವರೆಗೆ ರೈತರಿಗೆ ಹಣ ತಲುಪಿಲ್ಲ” ಎಂದರು.
ಬಸವರಾಜ ಬೊಮ್ಮಾಯಿ ಮಾತನಾಡಿ, “ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಪರಿಹಾರ ನೀಡದೇ ರಾಜಕೀಯ ಮಾಡುತ್ತ ಕಾಲಹರಣ ಮಾಡುತ್ತಿದೆ. ರೈತರಿಗೆ ನ್ಯಾಯ ಕೊಡದಿರುವ ಸರ್ಕಾರ ಬಹಳ ದಿನ ಉಳಿಯುವುದಿಲ್ಲ” ಎಂದು ಕಿಡಿಕಾರಿದರು.
“ಬರ, ಪ್ರವಾಹ ಬಂದರೆ ಜನ ಸಂಕಷ್ಟದಲ್ಲಿ ಇದ್ದಾಗ ಸರ್ಕಾರ ಧಾವಿಸಿ ಸಹಾಯ ಮಾಡಿದರೆ ಅದು ಜೀವಂತ ಇದ್ದಂತೆ. ಸರ್ಕಾರ ರೈತರ ಕಡೆ ನೋಡದಿದ್ದರೆ ಅದು ಸತ್ತಂತೆ. ರಾಜ್ಯ ಸರ್ಕಾರ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ 18000 ಕೋಟಿ ರೂ. ನೀಡುವಂತೆ ಮನವಿ ಮಾಡಿದೆ. ಆದರೆ, ನಿವು ಕೇವಲ 105 ಕೋಟಿ ಬಿಡುಗಡೆ ಮಾಡಿದ್ದೀರಿ, ಅದು ಕೇವಲ ಶೇಕಡಾ 1% ಕೂಡ ಆಗುವುದಿಲ್ಲ” ಎಂದರು.
“ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಜೆಟ್ ನಲ್ಲಿ ಮೀಸಲಿಟ್ಟ 3000 ಕೋಟಿ ರೂ.ಗಳಲ್ಲಿ ಇದುವರೆಗೂ ಒಂದು ರೂಪಾಯಿ ಖರ್ಚಾಗಿಲ್ಲ. ಗೃಹ ಲಕ್ಷ್ಮೀ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಗೃಹಜ್ಯೋತಿ, ಯುವ ನಿಧಿ ಯೋಜನೆಗಳಿಂದಲೂ ಜನರಿಗೆ ಪ್ರಯೋಜನವಾಗಿಲ್ಲ. ಯಾವುದೇ ಗ್ಯಾರೆಂಟಿ ಯೋಜನೆಗಳೂ ಸಮರ್ಪಕವಾಗಿ ತಲುಪುತಿಲ್ಲ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದಲೂ ಪರಿಹಾರದ ಹಣ ಬಿಡುಗಡೆಯಾಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಮೂರು ತಿಂಗಳಿಗೊಮ್ಮೆ ಇಡೀ ದೇಶಕ್ಕೆ ಎನ್ ಡಿ ಆರ್ ಎಫ್ ಹಣ ಬಿಡುಗಡೆ ಮಾಡುತ್ತದೆ. ರಾಜ್ಯ ಸರ್ಕಾರ ಎನ್ ಡಿ ಆರ್ ಎಫ್, ಎಸ್ ಡಿಆರ್ ಎಫ್, ನಿದಿಯಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಅಕೌಂಟ್ ನಲ್ಲಿ ಎಷ್ಟು ಹಣ ಇದೆ ಎಂದು ಸರ್ಕಾರ ಬಹಿರಂಗ ಪಡೆಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ, ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕಾರದ ಎಸ್ ರಘು, ರವಿ ಸುಬ್ರಮಣ್ಯ, ಕೆ. ರಾಮಮೂರ್ತಿ ಹಾಜರಿದ್ದರು.