ದೇವನಹಳ್ಳಿ ರೈತ ಹೋರಾಟದ ವಿಚಾರದಲ್ಲಿ ಜುಲೈ 15ರವರೆಗೆ ಸಮಯ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಅವಧಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ರೈತರಿಗೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ನಟ ಪ್ರಕಾಶ ರಾಜ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಈ ವಿಚಾರವಾಗಿ ಮಾತನಾಡಿ, “‘ಸರ್ಕಾರ ಯಾರೋ ಕೆಲವು ರೈತರನ್ನು ಮಧ್ಯ ಕರೆ ತಂದು ಚಳವಳಿ ಒಡೆಯುವ ಪ್ರಯತ್ನ ಮಾಡುತ್ತಿದೆ. ಹಳ್ಳಿಗಳಿಗೆ ಪುಡಾರಿಗಳನ್ನು ಕಳುಹಿಸಿ ಹೆದರಿಸುತ್ತಿದೆ” ಎಂದು ಹೇಳಿದರು.
ಭೂಮಿ ಕೊಡಲು ಸಿದ್ಧ ಎಂದು ಕೆಲವು ರೈತರು ಸುದ್ದಿಗೋಷ್ಠಿ ಮಾಡಿರುವ ವಿಚಾರವಾಗಿ ಮಾತನಾಡಿ, “ಹಸಿರು ವಲಯ ಮಾಡುತ್ತೇವೆ ಎಂಬ ತಮ್ಮ ಪುಢಾರಿಗಳ ಮೂಲಕ ನಾಟಕ ಮಾಡಿಸಿ ಜನರನ್ನು ಹೆದರಿಸುತ್ತಿದೆ. ನಿಮ್ಮ ನಾಟಕ ನಮ್ಮೆಲ್ಲರ ಕಣ್ಣಿಗೆ ಕಾಣಿಸುತ್ತಿದೆ. 15 ರಂದು ರೈತ ಪರ ನಿರ್ಧಾರ ಪ್ರಕಟಿಸದೇ ಇದ್ದರೆ ಹೋರಾಟ ಕ್ರಾಂತಿಯಿಂದ ಕೂಡಿರಲಿದೆ” ಎಂದು ಎಚ್ಚರಿಸಿದರು.
“ದೇವನಹಳ್ಳಿಯಲ್ಲಿ ರೈತರ ಜಮೀನು ಕಿತ್ತುಕೊಂಡು ಅಲ್ಲಿ 1700 ಎಕರೆಯಲ್ಲಿ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ರಾಜ್ಯ ಸರ್ಕಾರ ಈಗ ಕೇಂದ್ರದ ಅನುಮತಿ ಕೇಳಿದೆ. ಕಾರಿಡಾರ್‌ಗೆ ಏಕೆ ಇಷ್ಟು ಜಾಗ ಬೇಕು ಎಂಬುದನ್ನು ಅವರು ನಕ್ಷೆ ಸಮೇತ ವಿವರಿಸಲಿ” ಎಂದು ಆಗ್ರಹಿಸಿದರು.
“ಕಾರಿಡಾರ್ ಗೆ ಕೇವಲ 100 ಎಕರೆ ಬಳಸಿ ಉಳಿದ ಜಮೀನಿನಲ್ಲಿ ಐಷಾರಾಮಿ ಹೋಟೆಲ್ ಕಟ್ಟುತ್ತಾರೆ. ಅಲ್ಲಿ ನಮ್ಮ ರೈತರು ಕೂಲಿಯಾಳು ಗಳಾಗಬೇಕಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.