ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಎಂ.ಎ.ಸಲೀಂ ನೇಮಕವಾಗಿದ್ದಾರೆ.
ಹಾಲಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರು ಇಂದು (ಮೇ 21) ಸೇವೆಯಿಂದ ನಿವೃತ್ತರಾಗುತ್ತಿದ್ದು, ಇವರ ಸ್ಥಾನಕ್ಕೆ ಹಂಗಾಮಿಯಾಗಿ ಡಾ.ಎಂ.ಎ.ಸಲೀಂ ಅವರು ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ. ಎರಡು ತಿಂಗಳ ಬಳಿಕ ಕಾಯಂ ಆಗಿ ನೇಮಕಗೊಳ್ಳಲಿದ್ದಾರೆ.
ಅಲೋಕ್ ಮೋಹನ್ ಅವರ ಅವಧಿ ಏಪ್ರಿಲ್‌ಗೆ ಮುಗಿದಿತ್ತಾದರೂ ಡಿಜಿಪಿಯಾಗಿ ಎರಡು ವರ್ಷದ ಅವಧಿ ಮುಗಿಸುವ ಉದ್ದೇಶದಿಂದ ಮೂರು ವಾರಗಳ ಕಾಲ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಸಲೀಂ ಅವರು ಮುಂದಿನ ವರ್ಷದ ಜೂನ್‌ಗೆ ನಿವೃತ್ತರಾಗಲಿದ್ದು. ಹದಿಮೂರು ತಿಂಗಳ ಕಾಲ ಡಿಜಿಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕರ್ನಾಟಕದ ತುಮಕೂರು ಜಿಲ್ಲೆಯವರಾದ ಡಾ.ಸಲೀಂ ಅವರು ಮೂರು ದಶಕದ ಅವಧಿಯಲ್ಲಿ ಕುಶಾಲನಗರ ಎಎಸ್ಪಿ, ಉಡುಪಿ, ಹಾಸನ ಎಸ್ಪಿ, ಮೈಸೂರು ನಗರ ಪೊಲೀಸ್ ಆಯುಕ್ತ, ದಾವಣಗೆರೆ ಐಜಿಪಿ, ಬೆಂಗಳೂರು ನಗರ ಸಂಚಾರ ವಿಭಾಗದ ಮುಖ್ಯಸ್ಥ ಈಗ ಸಿಐಡಿ ಡಿಜಿಪಿಯಾಗಿದ್ದಾರೆ. ಸಂಚಾರ ವಿಷಯದಲ್ಲಿಯೇ ಇವರು ಪಿಎಚ್‌ಡಿ ಮಾಡಿದ್ದಾರೆ.