Homeಕರ್ನಾಟಕಒಂದೇ ಸೂರಿನಡಿ ಹತ್ತಾರು ಕಚೇರಿ, ಹೆಬ್ಬಾಳದಲ್ಲಿ ಸರ್ಕಾರಿ ಕಚೇರಿಗಳ ಸಂಕೀರ್ಣ ಉದ್ಘಾಟಿಸಿದ ಬೈರತಿ ಸುರೇಶ್

ಒಂದೇ ಸೂರಿನಡಿ ಹತ್ತಾರು ಕಚೇರಿ, ಹೆಬ್ಬಾಳದಲ್ಲಿ ಸರ್ಕಾರಿ ಕಚೇರಿಗಳ ಸಂಕೀರ್ಣ ಉದ್ಘಾಟಿಸಿದ ಬೈರತಿ ಸುರೇಶ್

ಒಂದೇ ಸೂರಿನಡಿ ಹತ್ತಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆರ್.ಟಿ.ನಗರದ ಗಂಗೇನಹಳ್ಳಿಯಲ್ಲಿ ನೂತನ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ನಗರಾಭಿವೃದ್ಧಿ ಮತ್ತು ಹೆಬ್ಬಾಳ ಕ್ಷೇತ್ರದ ಶಾಸಕರೂ ಆದ ಬೈರತಿ ಸುರೇಶ್ ಬುಧವಾರ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಇದುವರೆಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಕಚೇರಿಗಳು ಬೇರೆ ಬೇರೆ ಸ್ಥಳಗಳಲ್ಲಿದ್ದವು. ಇದರಿಂದ ಕ್ಷೇತ್ರದ ನಾಗರಿಕರಿಗೆ ಕಚೇರಿಯಿಂದ ಕಚೇರಿಗಳಿಗೆ ಅಲೆಯುವಂತಾಗಿ ಸಂಕಷ್ಟ ಅನುಭವಿಸುವಂತಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಗಂಗೇನಹಳ್ಳಿಯಲ್ಲಿ ಸುಸಜ್ಜಿತವಾದ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯದೇ ಈ ಸಂಕೀರ್ಣವನ್ನು ನಿರ್ಮಾಣ ಮಾಡಲಾಗಿದ್ದು, ಬಿಬಿಎಂಪಿ ಕಂದಾಯ ಇಲಾಖೆ, ನಾಡಕಚೇರಿ, ಹೆಬ್ಬಾಳ ವಿಭಾಗದ ವೈದ್ಯಾಧಿಕಾರಿಗಳು, ಆರ್.ಟಿ. ನಗರ ಸಂಚಾರಿ ಪೊಲೀಸ್ ಠಾಣೆ, ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರ ಕಚೇರಿ, ಗಂಗೇನಹಳ್ಳಿ ವಾರ್ಡ್ ಕಚೇರಿ ಸೇರಿದಂತೆ ಸರ್ಕಾರದ 10 ಕ್ಕೂ ಹೆಚ್ಚು ಕಚೇರಿಗಳು ಇನ್ನು ಮುಂದೆ ಇಲ್ಲಿಂದಲೇ ಕಾರ್ಯನಿರ್ವಹಣೆ ಮಾಡಲಿವೆ ಎಂದು ಹೇಳಿದರು.

ಫೆ.2 ರ ಗಡುವು

ಎಲ್ಲ ಸರ್ಕಾರಿ ಕಚೇರಿಗಳು ಫೆಬ್ರವರಿ 2 ರೊಳಗೆ ಈ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕು. ಅಂದಿನಿಂದಲೇ ನಾಗರಿಕರಿಗೆ ಸೇವೆಗಳನ್ನು ಒದಗಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಗಡುವು ವಿಧಿಸಿದರು.

ಇಲ್ಲಿನ ಸರ್ಕಾರಿ ಕಚೇರಿಗಳು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಡ್ಡಾಯವಾಗಿ ಕಾರ್ಯನಿರ್ವಹಣೆ ಮಾಡಬೇಕು. ಒಂದು ವೇಳೆ ಸಾರ್ವಜನಿಕರನ್ನು ವಿನಾಕಾರಣ ಕಾಯಿಸಿದರೆ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಈ ಕಚೇರಿ ಆರಂಭದಿಂದಾಗಿ ಆರ್.ಟಿ.ನಗರ, ಜೆಸಿ ನಗರ, ಹೆಬ್ಬಾಳ ಸೇರಿದಂತೆ ಕ್ಷೇತ್ರದ ಬಹಳಷ್ಟು ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿ ದೊರಕಿಸಿದಂತಾಗುತ್ತದೆ ಮತ್ತು ಅವರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿರುವ ಕಚೇರಿಗಳು

ಹೆಬ್ಬಾಳ ಉಪವಿಭಾಗ, ಜೆಸಿ ನಗರ ಉಪವಿಭಾಗ ಮತ್ತು ಹೆಬ್ಬಾಳ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು, ಬೆಂಗಳೂರು ಉತ್ತರ ವಲಯದ ಅರಣ್ಯ ಅಧಿಕಾರಿ, ಸಭಾಂಗಣ, ಹೆಬ್ಬಾಳ ವಿಭಾಗದ ಆರೋಗ್ಯ ವೈದ್ಯಾಧಿಕಾರಿ, ಜನನ ಮತ್ತು ಮರಣ ನೋಂದಣಿ ಕಚೇರಿ, ಎರಡು ನಾಡಕಚೇರಿಗಳು, ಆರ್ ಟಿ ನಗರ ಸಂಚಾರ ಪೊಲೀಸ್ ಠಾಣೆ, ಗಂಗೇನಹಳ್ಳಿ ವಾರ್ಡ್ ಕಚೇರಿ, ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣೆ, ಹೆಬ್ಬಾಳ ಚುನಾವಣೆ ವಿಭಾಗ, ಜೆಸಿ ನಗರ ಮತ್ತು ಹೆಬ್ಬಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಮತ್ತು ಕಾರ್ಯಪಾಲಕ ಅಭಿಯಂತರರ ಕಚೇರಿಗಳು ಕಾರ್ಯನಿರ್ವಹಿಸಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments