Homeಕರ್ನಾಟಕಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ: ಆರ್ ಅಶೋಕ್

ಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ: ಆರ್ ಅಶೋಕ್

ಕಾಂತರಾಜು ವರದಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾತುರಿ ತೋರುತ್ತಿರುವುದು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಆರೋಪಿಸಿದರು.

ವಿಧಾನಸೌಧದ ಅಧಿಕೃತ ಕಚೇರಿಯಲ್ಲಿ ಪೂಜೆ ನೆರವೇರಿಸಿ ಗುರುವಾರ ಕಾರ್ಯಾರಂಭ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವರದಿಯ ಮೂಲಪ್ರತಿ ಕಾಣೆಯಾಗಿದೆ, ಅದಕ್ಕೆ ಕಾರ್ಯದರ್ಶಿ ಸಹಿ ಇಲ್ಲ, ಇದೊಂದು ಅವೈಜ್ಞಾನಿಕ ವರದಿ ಎಂದು ಅನೇಕ ಸಮುದಾಯಗಳು ಆರೋಪಿಸಿವೆ, ಸಚಿವ ಸಂಪುಟದಲ್ಲೇ ಸಹಮತ ಇಲ್ಲ. ಇಂತಹ ಸಂದರ್ಭದಲ್ಲಿ ವಿವಾದಿತ ವರದಿ ಪಡೆಯಲು ಆತುರ ಏಕೆ ಎಂದು ಪ್ರಶ್ನಿಸಿದರು.

“ಸರಕಾರದ ಕೋಟಿಗಟ್ಟಲೇ ಹಣ ಕೊಟ್ಟು ಸಿದ್ಧಪಡಿಸಿದ ವರದಿ ಕಳುವಾಗಲು ಯಾರು ಕಾರಣ? ಅದರ ಹೊಣೆ ಯಾರದ್ದು? ಕಳುವು ಪ್ರಕರಣದ ಬಗ್ಗೆ ಏಕೆ ತನಿಖೆ ನಡೆಸಲಿಲ್ಲ. ಮೂಲ ವರದಿ ಕಳುವಾಗಿದ್ದರೂ ಅದರ ದತ್ತಾಂಶ ಇದೆ ಎಂದು ಪರಿಷ್ಕೃತ ವರದಿ ಸಿದ್ಧಪಡಿಸುವುದು ಎಷ್ಟು ಸರಿ” ಎಂದು ಮುಖ್ಯಮಂತ್ರಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಯಾರನ್ನೋ ಓಲೈಸಲು ಸಿಎಂ ಯತ್ನ

“ಹತ್ತು ವರ್ಷಗಳ ಹಿಂದಿನ ಜನಸಂಖ್ಯೆಗೂ, ಈಗಿನ ಜನಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ. ಸಾರ್ವಜನಿಕರಿಂದಲೂ ತಮ್ಮ ಮನೆಗಳಿಗೆ ಸಮೀಕ್ಷೆ ನಡೆಸುವವರು ಬಂದಿರಲಿಲ್ಲ ಎಂದು ವ್ಯಾಪಕ ದೂರುಗಳು ಬಂದಿವೆ. ಇಷ್ಟಾದರೂ ವರದಿ ಸ್ವೀಕರಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಆತುರ ತೋರುತ್ತಿರುವುದು ಜನರಲ್ಲಿ ಸಂಶಯವನ್ನು ಹುಟ್ಟು ಹಾಕಿದೆ” ಎಂದರು.

“ಈ ಆತಿಯಾದ ಆತುರದ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಓಲೈಸುವ ಹುನ್ನಾರ ಇದ್ದಂತಿದೆ. ಸಿಎಂ ಅವರ ಈ ನಡುವಳಿಕೆ ಹಿಂದೆ ಏನನ್ನೂ ಮುಚ್ಚಿಡುವ, ಯಾರನ್ನೂ ರಕ್ಷಿಸುವ ಸಂಶಯ ಮೂಡುತ್ತಿದೆ. ಈ ಎಲ್ಲಾ ವಿವಾದಗಳ ಕಾರಣಕ್ಕೆ ನಮ್ಮ ಸರಕಾರ ವರದಿಯ ಸಹವಾಸಕ್ಕೆ ಹೋಗಿರಲಿಲ್ಲ” ಎಂದು ಹೇಳಿದರು.

ಪಾರದರ್ಶಕತೆ ಪ್ರದರ್ಶಿಸಿ


ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬ ವಿಷಯದಲ್ಲಿ ನಮ್ಮ ಸಹಮತವಿದೆ. ಆದರೆ ಅವೈಜ್ಞಾನಿಕ, ವಿವಾದಿತ ವರದಿ ಆಧರಿಸಿ ಕ್ರಮಕ್ಕೆ ಮುಂದಾದರೆ ನಮ್ಮ ವಿರೋಧವಿದೆ. ಒಂದು ವೇಳೆ ಇವರಿಗೆ ನಿಜವಾಗಿಯೂ ಮೀಸಲು ನೀಡುವ ವಿಷಯದಲ್ಲಿ ಬದ್ಧತೆ ಇದ್ದರೆ ಪಾರದರ್ಶಕವಾಗಿ ಮರು ಸಮೀಕ್ಷೆ ನಡೆಸಲಿ. ವಿರೋಧ ವ್ಯಕ್ತಪಡಿಸಿರುವ ಸ್ವಾಮೀಜಿಗಳು, ಮುಖಂಡರನ್ನು ಕರೆದು ಅಭಿಪ್ರಾಯ ಕೇಳಲಿ” ಎಂದು ಆಗ್ರಹಿಸಿದರು.

ಹೋರಾಟ ನಿಶ್ಚಿತ

“ಎಚ್ಚರಿಕೆ, ವಿರೋಧಗಳ ನಡುವೆಯೂ ತರಾತುರಿಯಲ್ಲಿ ವರದಿ ಪಡೆಯಲು ಮುಂದಾದರೆ ರಾಜ್ಯಾದ್ಯಂತ ಪಕ್ಷವು ಉಗ್ರವಾದ ಹೋರಾಟ ನಡೆಸಲಿದೆ. ಅದಕ್ಕೆ ಅವಕಾಶ ನೀಡದೆ ವರದಿ ಕಳವಿಗೆ ಕಾರಣಗಳನ್ನು ಪತ್ತೆ ಹಚ್ಚಲಿ” ಎಂದರು.

ಯಾರ ಮನೆಯಲ್ಲಿ ಕುಳಿತು ಬರೆದರು?

ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂಬ ಕಾಂತರಾಜು ಅವರ ಸ್ಪಷ್ಟನೆಗೆ, “ಹಾಗಿದ್ದರೆ ಕಾರ್ಯದರ್ಶಿ ಅವರು ಏಕೆ ಸಹಿ ಮಾಡಿಲ್ಲ? ಸಹಿ ಮಾಡಿಸಲು ಆಗಿಲ್ಲ ಎಂದರೆ ಯಾರನ್ನು ಮೆಚ್ಚಿಸಲು, ಯಾರದೊ ಮನೆಯಲ್ಲಿ ಕುಳಿತು ವರದಿ ಬರೆದಿರಬಹುದು. ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದ ವ್ಯಕ್ತಿಗೆ ಸರಕಾರಕ್ಕೆ ಸಲ್ಲಿಸುವ ವರದಿಗೆ ಸಹಿ ಮಾಡಿಸಲು ಆಗದಷ್ಟು ಮರೆವು ಇತ್ತೇ” ಎಂದು ವ್ಯಂಗ್ಯವಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments