Homeಕರ್ನಾಟಕತೇಜೋವಧೆ ಮಾಡುವ ಅಂಶ ಇಟ್ಟುಕೊಂಡು ರಾಜಕಾರಣ ಮಾಡಬೇಡಿ: ವಿಜಯೇಂದ್ರನಿಗೆ ಶಾಸಕ ಪ್ರದೀಪ್‌ ಈಶ್ವರ್ ಕಿವಿಮಾತು

ತೇಜೋವಧೆ ಮಾಡುವ ಅಂಶ ಇಟ್ಟುಕೊಂಡು ರಾಜಕಾರಣ ಮಾಡಬೇಡಿ: ವಿಜಯೇಂದ್ರನಿಗೆ ಶಾಸಕ ಪ್ರದೀಪ್‌ ಈಶ್ವರ್ ಕಿವಿಮಾತು

ಯಾರೋ ಒಬ್ಬರು ಚೋಟಾ ಸಹಿ ಹಾಕಿದ ಕಾರಣಕ್ಕೆ ಯಡಿಯೂರಪ್ಪ ಅವರು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಆ ಚೋಟಾ ಸಹಿ ಹಾಕಿದವರು ಯಾರು ಎಂಬುದು ರಾಜ್ಯಕ್ಕೆ ಗೊತ್ತು ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರನಿಗೆ ತಿರುಗೇಟು ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, “ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಚರ್ಚೆ ಮಾಡಬೇಕಾದ ವಿಚಾರಗಳನ್ನು ಬಿಟ್ಟು ವಿಷಯಾಂತರ ಮಾಡಿ ಮಾತನಾಡುತ್ತಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇರ್ ಸ್ಟೈಲ್ ಬಗ್ಗೆ ಮಾತನಾಡುವ ಬದಲು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಲಿ” ಎಂದರು.

“ಶಿವಮೊಗ್ಗದ ಇತಿಹಾಸದಲ್ಲಿ ಬಂಗಾರಪ್ಪ ಅವರು ಹಾಗೂ ಯಡಿಯೂರಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ. ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕದ ಮೂಲಕ ಹಳ್ಳಿ ಯುವಕರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಅಪ್ಪನ ಹಾದಿಯಂತೆ ಮಧು ಬಂಗಾರಪ್ಪ ಅವರು 12 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ಕಟ್ಟುನಿಟ್ಟಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಿವೆ. ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ” ಎಂದು ಹೇಳಿದರು.

“ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಕೇಂದ್ರದ ಬಳಿ ಮಾತನಾಡಿಲ್ಲ. 26 ಜನ ಸಂಸದರಿದ್ದರೂ ಒಮ್ಮೆಯೂ ದನಿ ಎತ್ತಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷದ 20 ಕ್ಕೂ ಹೆಚ್ಚು ಸಂಸದರು ರಾಜ್ಯಕ್ಕೆ ಬೇಕಾದ ಸವಲತ್ತುಗಳನ್ನು ತರುತ್ತಾರೆ. ನೀವು ಅನವಶ್ಯಕ ಮಾತುಗಳನ್ನು ಬಿಟ್ಟು ಹಿಂದುಳಿದ ವರ್ಗಗಳ ನಾಯಕರು ಬೆಳೆಯಲು ಅವಕಾಶ ಮಾಡಿಕೊಡಿ” ಎಂದು ಹೇಳಿದರು.

“ಯಡಿಯೂರಪ್ಪ, ಈಶ್ವರಪ್ಪ ಅವರು ಬಿಜೆಪಿಯನ್ನು ಕರ್ನಾಟಕದಲ್ಲಿ ತಳಮಟ್ಟದಿಂದ ಕಟ್ಟಿದ್ದಾರೆ. ಈಶ್ವರಪ್ಪ ಅವರನ್ನು ಕರ್ನಾಟಕದ ಅಡ್ವಾನಿ ಎಂದು ಕರೆಯಲಾಗುತ್ತಿತ್ತು. ಅಂತಹವರನ್ನು ವಿಜಯೇಂದ್ರ ಅವರು ಅದ್ವಾನ ಮಾಡಿದ್ದಾರೆ. ಈಶ್ವರಪ್ಪ ಅವರು ಹಾಗೂ ಅವರ ಮಗನಿಗೆ ಟಿಕೆಟ್ ಏಕೆ ತಪ್ಪಿಸಿದ್ದೀರಿ ಉತ್ತರಿಸಿ. ನೀವು ಓದುವುದು ಕಡಿಮೆ ಮಾಡಿರಬೇಕು ಅಥವಾ ನಿಮಗೆ ಸಲಹೆ ನೀಡುತ್ತಿರುವವರು, ಸುತ್ತಮುತ್ತ ಇರುವವರು ಓದುವುದು ಕಡಿಮೆ ಮಾಡಿರಬೇಕು ಆದ ಕಾರಣಕ್ಕೆ ನೀವು ತಾಳ ತಪ್ಪಿದವರಂತೆ ಮಾತನಾಡುತ್ತಾ ಇದ್ದೀರಿ” ಎಂದು ಕುಟುಕಿದ್ದಾರೆ.

“ಬಸನಗೌಡ ಪಾಟೀಲ ಯತ್ನಾಳ ಅವರು ವಿರೋಧ ಪಕ್ಷಗಳ ಮೇಲೆ ಕಿಡಿ ಕಾರಿದ್ದಕ್ಕಿಂತ ಹೆಚ್ಚು ವಿಜಯೇಂದ್ರ ಅವರ ಮೇಲೆ ಕಿಡಿ ಕಾರಿದ್ದಾರೆ. ಇದು ಯಾವ ಕಾರಣಕ್ಕೆ ಎಂದು ಉತ್ತರಿಸಬಹುದೇ? ರಾಜ್ಯಕ್ಕೆ ಬರಬೇಕಾದ ಬರ ಪರಿಹಾರದ ಬಗ್ಗೆ ಒಮ್ಮೆಯೂ ದನಿ ಎತ್ತಿಲ್ಲ. ವಿರೋಧ ಪಕ್ಷದ ರಾಜ್ಯ ಅಧ್ಯಕ್ಷರಾಗಿ ತಲೆಯಲ್ಲಿ ವಿಷಯಗಳು ಇಲ್ಲದೇ ಇದ್ದಾಗ ಈ ರೀತಿಯ ಕ್ಷುಲ್ಲಕ ವಿಚಾರಗಳು ಮುನ್ನೆಲೆಗೆ ಬರುತ್ತವೆ” ಎಂದಿದ್ದಾರೆ.

“ರಾಜ್ಯದ ಭವಿಷ್ಯವನ್ನು ಕಟ್ಟುವಂತ ಚರ್ಚೆ ನಡೆಸೋಣ ಅದನ್ನು ಬಿಟ್ಟು ಕೇವಲ ತೇಜೋವಧೆ ಮಾಡುವ ಅಂಶಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದು ವಿಜಯೇಂದ್ರ ಅವರಿಗೆ ಸಲಹೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್‌‌, ಬಿ ವೈ ವಿಜಯೇಂದ್ರ, ಶಾಸಕ ಪ್ರದೀಪ್ ಈಶ್ವರ್, Basanagowda Patil Yatnal, B Y Vijayendra, MLA Pradeep Eshwar,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments