Homeಕರ್ನಾಟಕಪದೇಪದೆ ನಾಯಕತ್ವ ಬದಲಾವಣೆ ಬಗ್ಗೆ ಕೇಳಬೇಡಿ: ಮಾಧ್ಯಮಗಳಿಗೆ ವಿನಂತಿಸಿದ ಮಹದೇವಪ್ಪ

ಪದೇಪದೆ ನಾಯಕತ್ವ ಬದಲಾವಣೆ ಬಗ್ಗೆ ಕೇಳಬೇಡಿ: ಮಾಧ್ಯಮಗಳಿಗೆ ವಿನಂತಿಸಿದ ಮಹದೇವಪ್ಪ

ನಾಯಕತ್ವ ಬದಲಾವಣೆಯ ಕುರಿತಾಗಿ ಕಾಂಗ್ರೆಸ್ ಪಕ್ಷದ ಒಳಗೆ ಯಾವುದೇ ಪ್ರಶ್ನೆಗಳು ಏಳದಿದ್ದರೂ ನಮ್ಮ ಮಾಧ್ಯಮ ಮಿತ್ರರು ಪ್ರತಿದಿನ ಅದೇ ಪ್ರಶ್ನೆಗಳನ್ನು ಸರ್ಕಾರದ ಮುಖ್ಯಸ್ಥರು, ಸಚಿವರು ಹಾಗೂ ನಾಯಕರ ಬಳಿ ಕೇಳುತ್ತಿರುವುದು ಮುಜುಗರ ತರುವಂತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್‌ ಸಿ ಮಹದೇವಪ್ಪ ಹೇಳಿದ್ದಾರೆ.

“ಸರ್ಕಾರವೊಂದು ತಾನು ಜನರಿಗೆ ನೀಡಿದ ಪ್ರಣಾಳಿಕೆಗಳನ್ನು ಸಮರ್ಥವಾಗಿ ಜಾರಿಗೊಳಿಸಿ, ಜನ ಸಾಮಾನ್ಯರ ಬದುಕು ಹಸನಾಗುವ ನಿಟ್ಟಿನಲ್ಲಿ ಆಡಳಿತವನ್ನು ನೀಡುತ್ತಿರುವಾಗ, ಆಡಳಿತಾತ್ಮಕ ಸ್ಥಿರತೆ, ಜನರ ನಂಬಿಕೆಗೆ ವಿರುದ್ಧವಾಗಿ, ಜನರನ್ನು ಗೊಂದಲಗೊಳಿಸುವ ಹಾಗೆ ಪ್ರತಿದಿನ ಕೇಳುತ್ತಿರುವ ಪ್ರಶ್ನೆಗಳು ಆಡಳಿತಾತ್ಮಕ ದೃಷ್ಟಿಯಿಂದ ಅಷ್ಟೊಂದು ಸಮಂಜಸವಾಗಿ ಕಾಣುತ್ತಿಲ್ಲ” ಎಂದು ಎಕ್ಸ್‌ ತಾಣದಲ್ಲಿ ಬರೆದುಕೊಂಡಿದ್ದಾರೆ.

“ಒಂದು ರಾಜಕೀಯ ಪಕ್ಷವು ಕಾಲದ ಅಗತ್ಯಕ್ಕೆ ತಕ್ಕಂತೆ, ಜನರ ಅಭಿಪ್ರಾಯವನ್ನು ಆಧರಿಸಿ, ನಾಯಕರ ಸಾಮರ್ಥ್ಯವನ್ನು ಅರ್ಥೈಸಿ ಪಕ್ಷದ ವ್ಯಾಪ್ತಿಯ ಒಳಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದು ಯಾವುದೇ ಬಹಿರಂಗ ಒತ್ತಡದಿಂದ ಅಥವಾ ವ್ಯಕ್ತಿಗತ ಆಸೆಗಳಿಂದ ಜರುಗುವಂತಹ ಪ್ರಕ್ರಿಯೆ ಅಲ್ಲ” ಎಂದಿದ್ದಾರೆ.

“ನಾಯಕತ್ವ ಬದಲಾವಣೆಯ ನಿರ್ಧಾರ ಏನಾದರೂ ಇದ್ದರೆ ಅದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಾಧ್ಯಮದ ಮುಂದೆಯೇ ಬಂದು ತಿಳಿಸುತ್ತದೆ. ಹೀಗಾಗಿ ಹೋದಲ್ಲಿ ಬಂದಲ್ಲಿ ರಚ್ಚೆ ಹಿಡಿದವರಂತೆ ನಾಯಕತ್ವ ಬದಲಾವಣೆಯ ಪ್ರಶ್ನೆಯನ್ನು ಕೇಳುವ ಬದಲು, ಜನರ ನಂಬಿಕೆಯನ್ನು ಹೆಚ್ಚಿಸುವಂತಹ ಮತ್ತು ಜನರ ಬದುಕಿಗೆ ಪ್ರಯೋಜನ ಆಗುವಂತಹ ಮತ್ತು ಆಡಳಿತಾತ್ಮಕವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕೆಂದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಮಿತ್ರರನ್ನು ವಿನಂತಿಸುತ್ತೇನೆ” ಎಂದು ತಿಳಿಸಿದ್ದಾರೆ.

“ಸಾರ್ವಜನಿಕ ಜೀವನದಲ್ಲಿ ಜನರ ಸುಭದ್ರ ಬದುಕಿಗೇ ಮೊದಲ ಪ್ರಾಶಸ್ತ್ಯ ಇದ್ದು, ಇದಕ್ಕೆ ಪೂರಕವಾಗಿಯೇ ನಮ್ಮ ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿರುವಾಗ, ಸುಮ್ಮನೇ ಸೃಷ್ಟಿಸುವ ಒತ್ತಡಗಳು ಜನರಲ್ಲಿ ಗೊಂದಲ ಮೂಡಿಸದಿರಲಿ ಎಂದು ಈ ವೇಳೆ ಆಶಿಸುವೆನು!” ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments