ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರವಾಗಿ ಬಂದಿದ್ದ 14 ನಿವೇಶನಗಳನ್ನು ವಾಪಸ್ ನೀಡಲಾಗಿದೆ. ಈ ಬಗ್ಗೆ ಆರ್ ಅಶೋಕ್ ಬೇರೆ ಅರ್ಥ ಕಲ್ಪಿಸಿ, ತಪ್ಪು ಮಾಡಿರುವ ಕಾರಣ ವಾಪಸ್ ನೀಡಿದ್ದೀರಿ ಎಂದು ಆರೋಪ ಮಾಡಿದ್ದಾರೆ. ಆರ್ ಅಶೋಕ್ ಅವರಿಗೆ ಲೊಟ್ಟೆಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ಭೂ ಹಗರಣ ಮಾಡಿದ್ದು ನೆನಪಿಲ್ಲವೇ” ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಕಾನೂನು ಸಚಿವ ಸಚಿವ ಹೆಚ್ ಕೆ ಪಾಟೀಲ್ ಅವರು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣದ ದಾಖಲೆಯನ್ನು ಬಿಡುಗಡೆ ಮಾಡಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
“ಆರ್ ಅಶೋಕ್ ಮಾಡಿದ ಹಗರಣ ಬಗ್ಗೆ ದಾಖಲೆಗಳನ್ನು ಬಹಿರಂಗಗೊಳಿಸಿದ್ದೇವೆ. ಸರ್ವೇ ನಂಬರ್ 10/1, 10/11 F1 ಹಾಗೂ 10/11 F2 ಜಾಗದಲ್ಲಿ 32 ಗುಂಟೆ ಜಮೀನನ್ನು ಬಿಡಿಎ 24-02-1977 ರಲ್ಲಿ ಬಿಡಿಎ ನೋಟಿಫಿಕೇಶನ್ ಮಾಡುತ್ತದೆ. 27-2-1977 ರಲ್ಲಿ ಮತ್ತೊಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತದೆ. 31-8-1978 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ನಂತರ 26-02-2003 ಹಾಗೂ 2007 ರಲ್ಲಿ ಜಮೀನಿನ ಮೂಲ ಮಾಲೀಕರಾದ ರಾಮಸ್ವಾಮಿ ಅವರಿಂದ ಆರ್ ಅಶೋಕ್ ಅವರು ಈ ಜಮೀನನ್ನ ಶುದ್ಧ ಕ್ರಯದ ಮೂಲಕ ಖರೀದಿ ಮಾಡುತ್ತಾರೆ. ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಈ ಅರ್ಜಿಯ ಮೇಲೆ ಕೂಡಲೇ ಮಂಡಿಸಿ ಎಂದು ಬರೆಯುತ್ತಾರೆ. ನಂತರ ಕಡತ ಮಂಡನೆಯಾದ ಎರಡು ತಿಂಗಳಲ್ಲಿ ಭೂಸ್ವಾಧೀನ ಕೈಬಿಡಲಾಗುತ್ತದೆ” ಎಂದರು.
“ಡಿನೋಟಿಫಿಕೇಷನ್ ನಂತರ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡುತ್ತಾರೆ. ನಂತರ ಇದು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನಂತರ ಆರ್. ಅಶೋಕ್ ಅವರು ಈ ಜಮೀನು ಹಿಂತಿರುಗಿಸಲು ತೀರ್ಮಾನಿಸುತ್ತಾರೆ. 27-08-2011ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ನೀಡುತ್ತಾರೆ. ನಂತರ ಹೈಕೋರ್ಟ್ ಮೆಟ್ಟಿಲೇರಿ ನಂತರ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಅರವಿಂದ್ ಕುಮಾರ್ ಅವರು ವಿಚಾರಣೆ ಮಾಡಿ ತೀರ್ಪು ನೀಡುತ್ತಾರೆ. ಈ ತೀರ್ಪಿನಲ್ಲಿ ಈ ಭೂಮಿಯು ಬಿಡಿಎ ಅಧೀನದಲ್ಲಿರುವ ಕಾರಣ ಕ್ರಿಮಿನಲ್ ಮೊಕದ್ದಮೆ ಹೂಡುವ ಅಗತ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗುತ್ತದೆ” ಎಂದು ಹೇಳಿದರು.
“ಸಿದ್ದರಾಮಯ್ಯ ಅವರ ಪತ್ನಿ ತಮಗೆ ಪರಿಹಾರವಾಗಿ ಬಂದ ನಿವೇಶನ ವಾಪಸ್ ನೀಡಿರುವುದಕ್ಕೆ ನೀವು ಆಡುತ್ತಿರುವ ಮಾತುಗಳು ಹಾಗೂ ಈ ತೀರ್ಪನ್ನು ನೀವು ಯಾವ ರೀತಿ ಅರ್ಥೈಸುತ್ತೀರಿ? ಇದರ ಬಗ್ಗೆ ಜನರಿಗೆ ಏನು ಹೇಳುತ್ತೀರಿ?” ಎಂದು ಕೇಳಿದರು.
ಅಶೋಕ್ ಮಾಡಿದ್ದು ಸರಿಯೇ: ಕಾನೂನು ಸಚಿವ ಹೆಚ್ ಕೆ ಪಾಟೀಲ್ ಪ್ರಶ್ನೆ
“ಆರ್ ಅಶೋಕ್ ಅವರ ಹೇಳಿಕೆ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬಿಡಿಎ ಜಮೀನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ಬಿಡಿಎಗೆ ವಾಪಸ್ ನೀಡಿರುವವರು ತಮ್ಮ ಅನುಭವದ ಮಾತನ್ನು ಈಗ ಆಡುತ್ತಿದ್ದಾರೆ. ನೀವು ಮಾಡಿದ್ದು ಸರಿಯಾದರೆ, ಪಾರ್ವತಮ್ಮ ಅವರು ಮಾಡಿದ್ದರಲ್ಲಿ ತಪ್ಪು ಹೇಗಾಗುತ್ತದೆ? ಅನವಶ್ಯಕವಾಗಿ ತಪ್ಪು ಹೇರಿ, ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿ ಮಾಡುವುದನ್ನು ನಿಲ್ಲಿಸಬೇಕು. ನೀವು ನಿಮ್ಮದಲ್ಲದ ಭೂಮಿಯನ್ನು ಬಿಡಿಎಗೆ ಹಿಂಪಡೆಯುತ್ತೀರಿ, ಮುಡಾ ಸಂಸ್ಥೆಯಿಂದ ಪರಿಹಾರವಾಗಿ ಬಂದ ಪಾರ್ವತಿಯವರು ಹಿಂದಿರುಗಿಸಿದರೆ ಅದನ್ನು ತಪ್ಪು ಎನ್ನುತ್ತೀರಾ” ಎಂದುಕಾನೂನು ಸಚಿವ ಹೆಚ್ ಕೆ ಪಾಟೀಲ್ ಪ್ರಶ್ನಿಸಿದರು.
ಎಫ್‌ಐಆರ್ ಆದಾಗ ಅಶೋಕ್ ರಾಜೀನಾಮೆ ನೀಡಿರಲಿಲ್ಲ: ಕೃಷ್ಣ ಬೈರೇಗೌಡ
“ಬಿಜೆಪಿಯ ಆಷಾಢಭೂತಿತನಕ್ಕೆ ಮತ್ತೊಂದು ಉದಾಹರಣೆ ಸಂಪೂರ್ಣ ಸರ್ಕಾರೀ ಒಡೆತನದಲ್ಲಿದ್ದ ಲೊಟ್ಟೆಗೊಲ್ಲಹಳ್ಳಿ (ಡಾಲರ್ಸ್ ಕಾಲೋನಿ ಪಕ್ಕ) ಜಮೀನನ್ನು ಅಕ್ರಮವಾಗಿ ಬಿಡಿಗಾಸಿಗೆ ಖರೀದಿಸಿ, ಅಕ್ರಮವಾಗಿ ಸಂಬಂಧಪಡದ ವ್ಯಕ್ತಿಯಿಂದ ಅರ್ಜಿ ಕೊಡಿಸಿ, ಯಡಿಯೂರಪ್ಪನವರಿಂದ ಡೀನೋಟಿಫಿಕೇಷನ್ ಮೂಲ ಮಾಲೀಕರಿಗೆ ಮಾಡಿಸಿ, ಅಕ್ರಮವಾಗಿ ಖಾತೆ ಮಾಡಿಸಿಕೊಂಡ ಆರ್.ಅಶೋಕ್, ಸಿಕ್ಕಿ ಹಾಕಿಕೊಂಡು ಎಫ್‌ಐಆರ್ ಆದಾಗ ಯಾವ ರಾಜೀನಾಮೆಯನ್ನೂ ನೀಡಲಿಲ್ಲ” ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
“ಹೈಕೋರ್ಟ್ ಮೆಟ್ಟಿಲೇರಿದಾಗ ಇದ್ದಕ್ಕಿದ್ದಂತೆ ತನ್ನದಲ್ಲದ ಸರ್ಕಾರಿ ಜಮೀನನ್ನೇ ಬಿಡಿಎಗೆ ದಾನಪತ್ರ ಮಾಡಿ ಕೊಟ್ಟರು. ಈಗ ಸ್ವಂತ ಜಮೀನಿಗೆ ಕಾನೂನು ಪ್ರಕಾರ ಸೈಟು ಪರಿಹಾರ ಪಡೆದುಕೊಂಡಿದ್ದ ಪಾರ್ವತಮ್ಮನವರು, ಕ್ಷುಲ್ಲಕ ರಾಜಕೀಯಕ್ಕೆ ಬೇಸತ್ತು ಮುಡಾಗೆ ವಾಪಸ್ ಕೊಟ್ಟಾಗ ಇದೇ ಆರ್.ಅಶೋಕ್ ಕದ್ದ ಮಾಲಿನ ಉದಾಹರಣೆ ಕೊಡುತ್ತಾರೆ” ಎಂದು ಕಿಡಿಕಾರಿದರು.
“ಸಿಎಂ ಸಿದ್ದರಾಮಯ್ಯನವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದೂ ಒತ್ತಾಯಿಸುತ್ತಾರೆ. ಆರ್ ಅಶೋಕ್ ಅವರೇ ಸ್ವತಃ ಅಕ್ರಮ ಭೂ ವಂಚನೆ ಕೇಸಿಗೆ ಫಿಟ್ಟಾಗಿ ಹೈಕೋರ್ಟ್ ಮೆಟ್ಚಿಲೇರಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡ ಮಾನ್ಯ ಸತ್ಯವಂತ ನೀತಿವಂತ ಅಶೋಕ್ ಅವರೇ, ಮೊದಲು ನೀವು ತಮ್ಮ ವಿಪಕ್ಷ ನಾಯಕ ಸ್ಥಾನಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೀಗೆ ಮಾಡುವುದರಿಂದಲಾದರೂ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ಅಲ್ಪ ಮಟ್ಟಿಗಿನ ನೈತಿಕತೆ ಉಳಿಸಿಕೊಳ್ಳಿ” ಎಂದು ಕುಟುಕಿದರು.