Homeಕರ್ನಾಟಕಕ್ಷಮೆ ಕೇಳುತ್ತಲೇ ನನ್ನ ಪಕ್ಷ ನಿಷ್ಠೆ ಪ್ರಶ್ನಿಸುವವರು ಮೂರ್ಖರು ಎಂದ ಡಿ ಕೆ ಶಿವಕುಮಾರ್

ಕ್ಷಮೆ ಕೇಳುತ್ತಲೇ ನನ್ನ ಪಕ್ಷ ನಿಷ್ಠೆ ಪ್ರಶ್ನಿಸುವವರು ಮೂರ್ಖರು ಎಂದ ಡಿ ಕೆ ಶಿವಕುಮಾರ್

ಯಾರಿಗೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ. ಆದರೆ, ಒಂದು ವಿಚಾರ ಸ್ಪಷ್ಟ ಇರಲಿ, ಯಾರೂ ನನ್ನನ್ನು ಪ್ರಶ್ನೆ ಮಾಡಿಲ್ಲ. ಹೈಕಮಾಂಡ್ ಕೂಡ ಕೇಳಿಲ್ಲ. ಈ ವಿಚಾರ ಇಲ್ಲಿಗೆ ಮುಗಿಸೋಣ ಎಂದು ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ(RSS) ಸಂಘದ ಗೀತೆ ನಮಸ್ತೇ ಸದಾ ವತ್ಸಲೇ ಸಾಲುಗಳನ್ನು ವಿಧಾನಸಭೆ ಕಲಾಪದ ವೇಳೆ ಡಿ ಕೆ ಶಿವಕುಮಾರ್ ಪ್ರಸ್ತಾಪಿಸಿದ್ದರು. ಅದು ಸಾಕಷ್ಟು ಸದ್ದು ಮಾಡಿ ಡಿ ಕೆ ಶಿವಕುಮಾರ್ ಅವರ ಮಾತುಗಳಿಗೆ ಸ್ವತಃ ಕಾಂಗ್ರೆಸ್ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿ ಕೆ ಹರಿಪ್ರಸಾದ್ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಆರ್​​ಎಸ್​​ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.

ಇಂದು ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ. “ನನ್ನ ಮತ್ತು ಕಾಂಗ್ರೆಸ್ ಸಂಬಂಧ ಭಕ್ತ ಮತ್ತು ಭಗವಂತನ ಸಂಬಂಧ” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಉತ್ತರ ನೀಡುವಾಗ, ಆರ್ ಎಸ್ ಎಸ್ ಸಿದ್ಧಾಂತದ ಅರಿವಿದೆ ಎಂದು ಕಾಲೆಳೆದೆ ಅಷ್ಟೆ. ಅದು ಬಿಟ್ಟರೆ ಇನ್ನೇನಿಲ್ಲ” ಎಂದರು.

“ವಿಧಾನಸಭೆಯಲ್ಲಿ ಆಚಾರ ವಿಚಾರಗಳನ್ನು ಪಾಲನೆ ಮಾಡಿಕೊಂಡು ಬಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿಂದಲೇ ಗುರುತಿಸಿಕೊಂಡು ಬಂದಿದ್ದೇನೆ. ಹೊಸದಾಗಿ ಕಾಂಗ್ರೆಸ್ ಸೇರಿಲ್ಲ, ಯಾರ ಪಾಠವೂ ಅಗತ್ಯವಿಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಭಕ್ತ ಭಗವಂತನ ನಡುವಿರುವ ಸಂಬಂಧ. ನಾನು ಎಂಎ ಪೊಲಿಟಿಕಲ್ ವಿದ್ಯಾರ್ಥಿ” ಎಂದು ಹೇಳಿದರು.

“ರಾಜಕಾರಣಕ್ಕೆ ಬರೋದಕ್ಕಿಂತಲೂ ಮುನ್ನ ಎಲ್ಲ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯೂನಿಸಂ, ಬಿಜೆಪಿ, ಆರ್​​ಎಸ್​​ಎಸ್, ದಳ ಎಲ್ಲ ಪಕ್ಷಗಳ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಸಮಾವೇಶದಲ್ಲೂ ಭಾಗಿಯಾಗಿದ್ದೆ. ಅವರ ಶಿಸ್ತಿಗೆ ಬೆರಗಾಗಿದ್ದೆ. ನನ್ನ ಮಾತು ಯಾರಿಗಾದರೂ ನೋವಾಗಿದ್ದರೆ ಬೇಕಾದರೆ ಕ್ಷಮೆ ಕೇಳೋಣ. ಬಿಕೆ ಹರಿಪ್ರಸಾದ್​​ಗೂ ಕ್ಷಮೆ ಕೇಳೋಣ” ಎಂದರು.

“ನಾನು ಕಾಂಗ್ರಸ್ ಪಕ್ಷದಲ್ಲಿದ್ದೇನೆ ನಿಜ. ಹಾಗೆಂದು ನನ್ನ ಧರ್ಮ ನಾನು ಬಿಡಲ್ಲ. ನನ್ನ ಧರ್ಮದ ಜತೆಗೆ ಇತರ ಧರ್ಮಗಳ ಬಗ್ಗೆಯೂ ನನಗೆ ನಂಬಿಕೆ ಇದೆ. ಮುಸ್ಲಿಂ, ಕ್ರಿಶ್ಚಿಯನ್ ಇತರ ಧರ್ಮಗಳ ಬಗ್ಗೆಯೂ ಗೌರವ ಇದೆ. ಆದರೆ, ಇವೆಲ್ಲದಕ್ಕಿಂತಲೂ ಮಾನವ ಧರ್ಮದ ಮೇಲೆ ನಾನು ಹೆಚ್ಚು ನಂಬಿಕೆ ಇಟ್ಟಿದ್ದೇನೆ” ಎಂದು ಹೇಳಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments