ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಬಹಿರಂಗವಾಗಿ ರಂಭಾಪುರಿ ಶ್ರೀ ಹೇಳಿದ ಬೆನ್ನಲ್ಲೇ ಮತ್ತೋರ್ವ ಸ್ವಾಮಿ ಇದೇ ವಿಚಾರ ಬಗ್ಗೆ ಮಾತನಾಡಿದ್ದು, ಡಿಕೆಶಿ ಅವರು ಸಿಎಂ ಆಗುವುದು ನಿಶ್ಚಿತ ಎಂದಿದ್ದಾರೆ.
ಮಂಡ್ಯದಲ್ಲಿ ಶುಕ್ರವಾರ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಈ ಮಾತು ಹೇಳಿದ್ದು, “ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನ ಗಳಿಸಲು ಡಿ.ಕೆ.ಶಿವಕುಮಾರ್ ಸಾಕಷ್ಟು ಶ್ರಮಿಸಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ಅವರ ಅಭಿಮಾನಿಗಳ ಬಯಕೆ. ಅವರು ಸಿಎಂ ಆಗುವುದು ನಿಶ್ಚಿತ” ಎಂದು ಹೇಳಿದ್ದಾರೆ.
“ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಕಳೆದ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಬೆಂಬಲಿಸಿತ್ತು. ಮೈಸೂರು ಭಾಗದಲ್ಲಿ ಹೆಚ್ಚು ಒಲವು ತೋರಿದ್ದಕ್ಕಾಗಿ ಕಾಂಗ್ರೆಸ್‌ಗೆ ಹೆಚ್ಚು ಸೀಟುಗಳು ಬಂದಿವೆ. ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತದೆ ಎಂಬುದನ್ನು ಕಾದು ನೋಡೋಣ” ಎಂದು ತಿಳಿಸಿದರು.
“ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಸಿಎಂ ಆಗುವ ಹಂಬಲ ಇದ್ದೇ ಇರುತ್ತದೆ. ಅದೇ ರೀತಿ ನಾವು ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಲಿ ಎಂದು ಬಯಸುತ್ತೇವೆ. ಅವರು ಪಕ್ಷದ ಶಿಸ್ತಿನ ಸಿಪಾಯಿ. ತಾಳ್ಮೆಯಿಂದ ಕಾಯ್ದು, ಒಳ್ಳೆಯ ಸ್ಥಾನ ಪಡೆದುಕೊಳ್ಳುತ್ತಾರೆ. ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಯಾವುದಕ್ಕೂ ಆತುರಪಡುವುದಿಲ್ಲ” ಎಂದು ಹೇಳಿದರು.