ಮೂರು ವರ್ಷಗಳಾದರೂ ನಡೆಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಕಾಲ ಕೂಡಿಬಂದಿದ್ದು, ಜೂನ್-ಜುಲೈನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ಇಂದು (ಫೆ.17) ನಡೆಯಿತು.
ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ವೇಳಾ ಪಟ್ಟಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಿಚಾರಣೆ ವೇಳೆ ತಿಳಿಸಿದರು.
ಸರ್ಕಾರದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, “ಮೇ ತಿಂಗಳೊಳಗೆ ಮೀಸಲಾತಿ ನೀಡುವುದಾಗಿ ಸ್ಪಷ್ಟಪಡಿಸಿದರು. ಏನೆ ಆಗಲಿ ಮೇ ಅಂತ್ಯದೊಳಗೆ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕೊಡಲಾಗುವುದು. ಜೂನ್ ಅಥವಾ ಜುಲೈ ತಿಂಗಳಲ್ಲಿ ಚುನಾವಣೆ ಆಯೋಗ, ಚುನಾವಣೆಗಳನ್ನು ನಡೆಸಬಹುದು” ಎಂದು ತಿಳಿಸಿದರು.
ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ಹೇಳಿಕೆ ದಾಖಲಿಸಿಕೊಂಡು ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿತು. ಈ ಮೂಲಕ ನನೆಗುದಿಗೆ ಬಿದ್ದಿದ್ದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕೊನೆ ಕಾಲ ಕೂಡಿಬಂದಂತಾಗಿದೆ.