ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಕುರಿತಂತೆ ಸಮಗ್ರ ಚರ್ಚೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಐವಾನ್ ಶಾಹಿ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಸಾಮಾನ್ಯವಾಗಿ ಸಚಿವ ಸಂಪುಟ ಸಭೆಯಲ್ಲಿ ಇಡೀ ರಾಜ್ಯದ ಅಭಿವೃದ್ದಿ ಕುರಿತಂತೆ ಚರ್ಚೆ ನಡೆಯುತ್ತದೆ. ಆದರೆ, ಬಹಳ ವರ್ಷಗಳ ನಂತರ ಕಲಬುರಗಿಯಲ್ಲಿ ನಡೆಯುತ್ತಿರುವ ಸಂಪುಟ ಸಭೆಯಲ್ಲಿ ನಮ್ಮ ಭಾಗದ ಜನರ ಆಶಯದಂತೆ ಚರ್ಚೆ ನಡೆಸಿ ಅಭಿವೃದ್ದಿಯ ನೀಲಿನಕ್ಷೆ ತಯಾರಿಸಲಾಗುವುದು” ಎಂದರು.
ನಿಪುಣ ಕರ್ನಾಟಕ ಯೋಜನೆ
“ಕಕ ಭಾಗದದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಕೌಶಲ್ಯಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಂಟಿ ವತಿಯಿಂದ ‘ನಿಪುಣ – ಕರ್ನಾಟಕ’ ಎನ್ನುವ ಯೋಜನೆ ರೂಪಿಸಲಾಗಿದೆ” ಎಂದು ಹೇಳಿದರು.
ಸಿಎಸ್ ಜತೆ ಸಭೆ
“ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಾಳೆ ಸಭೆ ನಡೆಸಲಾಗುವುದು. ಇದೇ ರೀತಿ ಸಚಿವರ ಸಭೆ ನಡೆಸಲು ಸಿಎಂ ಅವರಿಗೆ ಮನವಿ ಮಾಡಲಾಗಿದೆ” ಎಂದರು.
ಪ್ರತ್ಯೇಕ ಸಚಿವಾಲಯ
“ಆರ್ಟಿಕಲ್ 371 (J) ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಕುರಿತಂತೆ ಬೇಡಿಕೆ ಎದ್ದಿದೆ. ಈ ಬಗ್ಗೆ ಕೂಡಾ ಚರ್ಚಿಸಲಾಗುವುದು. ಆರ್ಟಿಕಲ್ 371 (J) ಅಡಿಯಲ್ಲಿ ಈ ಭಾಗದಲ್ಲಿ 22,000 ಇಂಜಿನಿಯರಿಂಗ್ ಹಾಗೂ 2000 ವೈದ್ಯಕೀಯ ಸೀಟು ಹಂಚಿಕೆಯಾಗಿವೆ. ಇದೂ ಕೂಡಾ ಕಟ್ಟುನಿಟ್ಟಿನ ಜಾರಿಯಲ್ಲವೇ? ಈ ಬಗ್ಗೆ ಟೀಕೆಗಳು ಸಹಜ. ಆದರೆ, ನಮ್ಮ ಪ್ರಾಮಾಣಿಕ ಪ್ರಯತ್ನ ನಡೆಯಲಿದೆ” ಎಂದು ತಿಳಿಸಿದರು.
ಹನಿ ಟ್ರ್ಯಾಪ್ ಕಪ್ಪುಚುಕ್ಕೆ
“ಜಿಲ್ಲೆಯಲ್ಲಿ ಹನಿಟ್ರ್ಯಾಪ್ ನಡೆದಿರುವ ಕುರಿತಂತೆ ಈಗಾಗಲೇ ದೂರು ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಫಾರೆನ್ಸಿಕ್ ವರದಿ ಕೇಳಲಾಗಿದ್ದು, ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು” ಎಂದರು.
ಸಿಎಂ ಬದಲಾವಣೆ ಚರ್ಚೆ ನಡೆದಿಲ್ಲ
“ಸಿಎಂ ಬದಲಾವಣೆ ಚರ್ಚೆ ಸಂಪುಟದಲ್ಲಿ ನಡೆದಿಲ್ಲ ಅದು ಮಾಧ್ಯಮಗಳಲ್ಲಿ ಮಾತ್ರ ನಡೆದಿದೆ. ಸಚಿವರಾದ ಎಂ ಬಿ ಪಾಟೀಲ್ ಹಾಗೂ ಶಿವಾನಂದ್ ಪಾಟೀಲರು ಈ ವಿಚಾರದಲ್ಲಿ ಮಾತನಾಡಿರುವುದು ಗೊತ್ತಿದೆ. ಸಿಎಂ ಖುರ್ಚಿ ಖಾಲಿ ಇಲ್ಲ. ಯಾರೇ ಸಿಎಂ ಆದರೂ ಬೆಂಬಲವಿದೆ ಎಂದಷ್ಟೆ ಹೇಳಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ರಾಜ್ಯಪಾಲರ ಅಧಿಕಾರ ದುರ್ಬಳಕೆ
“ಸಿದ್ದಾರ್ಥ ಟ್ರಸ್ಟ್ ಗೆ ಭೂಮಿ ಮಂಜೂರು ಪ್ರಕ್ರಿಯೆ ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ. ಈ ಬಗ್ಗೆ ಮೊದಮೊದಲು ಜೋರಾಗಿ ಆರೋಪ ಮಾಡಿದ್ದ ವಿರೋದ ಪಕ್ಷದ ನಾಯಕರು ಹಾಗೂ ಬಿಜೆಪಿ ಅಧ್ಯಕ್ಷರು ಈಗ ಮೌನವಾಗಿದ್ದರೆ. ಶಿಕ್ಷಣ ಸಂಸ್ಥೆ ನಡೆಸಲು ಅನಮತಿ ಪಡೆದುಕೊಂಡು ಈಗ ಬಿರಿಯಾನಿ ಹೋಟೆಲ್ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ಕೂಡಲೇ ಕ್ರಮ ಜರುಗಿಸುವ ರಾಜ್ಯಪಾಲರು ಈಗ ಏಕೆ ಕ್ರಮ ಜರುಗಿಸಿಲ್ಲ. ಹಾಗೇ ಕುಮಾರಸ್ವಾಮಿ ವಿರುದ್ದದ ದೂರಿನ ಬಗ್ಗೆಯೂ ಕ್ರಮವಿಲ್ಲ ಯಾಕೆ ? ಎಲ್ಲಿ ಬಿಜೆಪಿ ಪಕ್ಷ ಬಲಹೀನವಾಗಿದೆಯೋ ಅಲ್ಲಲ್ಲಿ ರಾಜ್ಯಪಾಲರ ಅಧಿಕಾರವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು ಆರೋಪಿಸಿದರು.