Homeಕರ್ನಾಟಕಸಿಎಂ ಜೊತೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಹಾಲಿನ ದರ ಹೆಚ್ಚಳ: ಸಚಿವ ವೆಂಕಟೇಶ್

ಸಿಎಂ ಜೊತೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಹಾಲಿನ ದರ ಹೆಚ್ಚಳ: ಸಚಿವ ವೆಂಕಟೇಶ್

ರೈತರು ಮತ್ತು ಗ್ರಾಹಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಸದಸ್ಯರಾದ ಉಮಾಶ್ರೀ ಮತ್ತು ಎಂ.ಜಿ. ಮೂಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಹಾಲಿನ ದರವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ರೈತರಿಂದ ಕೇಳಿ ಬಂದಿದೆ. ಪ್ರತಿ ಲೀಟರ್‌ಗೆ 10 ರೂ. ಹೆಚ್ಚಳ ಮಾಡಬೇಕೆಂದು ರೈತರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ಹಾಲು ಉತ್ಪಾದನಾ ಸಂಘಗಳು ಸಹಾ ಸಮ್ಮತಿಸಿವೆ. ಅಂತಿಮವಾಗಿ ರೈತರು ಮತ್ತು ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಎಷ್ಟು ಸಾಧ್ಯವೋ ಅಷ್ಟು ಬೇಗ ಕ್ರಮವನ್ನು ತೆಗೆದುಕೊಳ್ಳುತ್ತೇವೆ” ಎಂದರು.

“ಈಗಾಗಲೇ ರಾಜ್ಯದಲ್ಲಿ ಹಾಲು ಉತ್ಪಾದನೆ ಪ್ರತಿ ದಿನಕ್ಕೆ ಒಂದು ಕೋಟಿ ಲೀಟರ್‌ಗೆ ಹೆಚ್ಚಳವಾಗಿದೆ. ಹಿಂದೆ 95 ಲಕ್ಷ ಇತ್ತು. ಈಗ ಒಂದು ಕೋಟಿಗೂ ಅಧಿಕವಾಗಿದೆ. ಉತ್ಪಾದನಾ ವೆಚ್ಚವು ಹೆಚ್ಚಾಗುತ್ತಿದೆ. ಇದೆಲ್ಲಾ ಅಂಶಗಳನ್ನು ಪರಿಗಣಿಸಿ ನಾವು ಯಾರಿಗೂ ಹೊರೆಯಾಗದಂತೆ ದರ ಪರಿಷ್ಕರಣೆ ಮಾಡುತ್ತೇವೆ” ಎಂದು ಹೇಳಿದರು.

“ನಮ್ಮ ಸರ್ಕಾರದ ಅವಧಿಯಲ್ಲಿ ಮಾತ್ರ ಪ್ರೋತ್ಸಾಹ ಹಣ ಬಾಕಿಯಿಲ್ಲ. ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಅವಧಿಯಲ್ಲಿ ಹಾಲಿನ ಪ್ರೋತ್ಸಾಹವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಅವರು ಸರಿಯಾಗಿ ಪಾವತಿ ಮಾಡಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಬಾಕಿ ಇರುತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಂತ ಹಂತವಾಗಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿದ್ದೇವೆ. ರೈತರಿಗೆ ಬಾಕಿ ಹಣವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಬಿಡುಗಡೆ ಮಾಡುತ್ತೇವೆ” ಎಂದು ಅಭಯ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments