ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಅಡ್ಡಮತದಾನ ಮಾಡಿರುವ ಬಗ್ಗೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, “ಹೈಕೋರ್ಟ್‌ನ ಹಿರಿಯ ವಕೀಲರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ” ಎಂದರು.
“ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್‌ಗೂ ವಿಪ್ ಕಳಿಸಿದ್ದೆವು. ಕೊನೆಯ ಕ್ಷಣದವರೆಗೂ ನಮ್ಮ ಜೊತೆ ಮಾತಾಡಿದ್ದಾರೆ. ಪದೇ ಪದೇ ಮೋಸ ಮಾಡುವುದನ್ನು ಜನ ಸಹಿಸಲ್ಲ” ಎಂದು ಹೇಳಿದರು.
“ಸೋಮಶೇಖರ್ ಅವರು ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಅವರನ್ನು ಕ್ಷಮಿಸಲ್ಲ. ಅವರನ್ನು ಮಂತ್ರಿ ಮಾಡಿ, ಮೈಸೂರು ಉಸ್ತುವಾರಿ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತಾರೆ. ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ? ಇಂದು ಸೋಮಶೇಖರ್ ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ” ಎಂದರು.
ಎನ್ ರವಿಕುಮಾರ್ ಕಿಡಿ
“ನಮ್ಮ ಇಬ್ಬರು ಶಾಸಕರ ಮತ ಪಡೆಯಲು ಕಾಂಗ್ರೆಸ್ ದುಷ್ಟರಾಜಕಾರಣ ಮಾಡಿದೆ. ಕಾಂಗ್ರೆಸ್ಗೆ ಮತ ಹಾಕಿದವರಿಗೆ ಇದು ಆತ್ಮದ್ರೋಹ ಎಂದು ಹೇಳುತ್ತೇವೆ. ಅವರಾಗಿಯೇ ಬಂದು ಪಕ್ಷ ಸೇರಿದರು, ಅಧಿಕಾರ ಅನುಭವಿಸಿದರು. ಮುಂದಿನ ದಿನಗಳಲ್ಲಿ ಆ ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ” ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್ ರವಿಕುಮಾರ್ ಹೇಳಿದರು.
ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ವಿರುದ್ಧ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ಕರ್ನಾಟಕದ ಉಸ್ತುವಾರಿಗಳು ಹೈಕಮಾಂಡ್ಗೆ ದೂರು ನೀಡಲಿದ್ದಾರೆ. ಪಕ್ಷದಲ್ಲಿ ಇಬ್ಬರೂ ಶಾಸಕರಿಗೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಇದು ಅನುಕೂಲ ಸಿಂಧು ರಾಜಕಾರಣ ಎಂದು ಹೇಳಿದರು.
ರಾಜಕಾರಣದ ವ್ಯಭಿಚಾರ: ಸಿ ಟಿ ರವಿ
“ವ್ಯಕ್ತಿಯ ಸಂಬಂಧಕ್ಕಾಗಿ ರಾಜೀ ರಾಜಕಾರಣ ಒಳ್ಳೆಯದ್ದಲ್ಲ. ರಾಜಕಾರಣ ವ್ಯಭಿಚಾರ ಮಾಡುವವರು ಎಲ್ಲಾ ಕಡೆ ಸೆಟ್ ಆಗುತ್ತಾರೆ. ಹಾರ್ಡ್ಕೋರ್, ಸಿದ್ಧಾಂತ ರಾಜಕಾರಣ ಮಾಡುವುದು ನಿಷ್ಠೂರ ಆಗುತ್ತಾರೆ. ವ್ಯಭಿಚಾರದ ರಾಜಕಾರಣಕ್ಕೆ ಯಾರೂ ಮಣೆ ಹಾಕಬಾರದು. ಪಕ್ಷದೊಳಗಿದ್ದು ರಾಜಕೀಯ ವ್ಯಭಿಚಾರ ಮಾಡುವುದು ಶೂನ್ಯ ಸಹನೆ” ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.