ರಾಜ್ಯದ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಇದರಲ್ಲಿ ರಾಜ್ಯದ ಜನತೆಯ ಮುಖ್ಯವಾಗಿ ಉತ್ತರ ಕರ್ನಾಟಕದ ಭಾಗದ ಜನತೆಯ ಹಿತದೃಷ್ಟಿಯಿಂದ ಚರ್ಚೆ ಕಲಾಪ ನಡೆಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮನವಿ ಮಾಡಿದರು.
ಇಟಲಿಯ ವ್ಯಾಟಿಕನ್ ಸಿಟಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನಕ್ಕೆ ತೆರಳುವ ಮುನ್ನ ಮಂಗಳೂರಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಆಡಳಿತ ಪಕ್ಷ ಹಾಗೂ ವಿಪಕ್ಷಗಳು ತಮ್ಮ ವಿವಿಧ ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ” ಎಂದು ತಿಳಿಸಿದರು.
“ವಿಧಾನ ಮಂಡಳ ಚಳಿಗಾಲದ ಅಧಿವೇಶನವನ್ನು ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣಕ್ಕಾಗಿ ಒಂದು ದಿನ ಮೊಟಕುಗೊಳಿಸಲಾಗಿದೆ. ಡಿ.9ರಿಂದ 19ರ ವರೆಗೆ ಮಾತ್ರ ಅಧಿವೇಶನ ನಡೆಯಲಿದೆ” ಎಂದು ಹೇಳಿದರು.
“ಮೊದಲು 9ರಿಂದ 20ರ ವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಸಾಹಿತ್ಯ ಸಮ್ಮೇಳನ ಡಿ. 20ರಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಮತ್ತು ಸಚಿವರು ಅದರಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದರು.
‘ಮೋದಿ ನಂತರ ಅತಿ ಹೆಚ್ಚು ವಿದೇಶ ಪ್ರವಾಸ ಮಾಡಿದವರು ನೀವೇ ಇರಬೇಕು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಈ ವರ್ಷ ಹತ್ತು ದೇಶಗಳ ಪ್ರವಾಸ ಮಾಡಿದ್ದೇನೆ. ವಿದೇಶ ಪ್ರವಾಸದಲ್ಲಿ ಇನ್ನೊಬ್ಬರ ನಂತರದ ಸ್ಥಾನ ಅಲ್ಲ, ಅವರಿಗಿಂತ ಜಾಸ್ತಿ ವಿದೇಶ ಪ್ರವಾಸ ಮಾಡಬೇಕು ಎಂಬುದು ನನ್ನ ಆಸೆ” ಎಂದು ಹಾಸ್ಯವಾಗಿ ನುಡಿದರು.
“ಸ್ಪೀಕರ್ ಹುದ್ದೆಗೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೇನೆ. ನಾನು ಸ್ಪೀಕರ್ ಆಗಿರುವ ಕಾರಣಕ್ಕಾಗಿಯೂ ನನ್ನ ಕ್ಷೇತ್ರಕ್ಕೆ ಹೆಚ್ಚು ಅನುದಾನ ತರುತ್ತಿದ್ದೇನೆ. ಸ್ಪೀಕರ್ ಹುದ್ದೆಗೆ ಇಷ್ಟೆಲ್ಲ ಅವಕಾಶಗಳು ಇವೆ, ಈ ಹುದ್ದೆ ಅಲಂಕರಿಸಲು ಶಾಸಕರು ಮುಂದೆ ಬರಬೇಕು” ಎಂದು ನಗುತ್ತ ಹೇಳಿದರು.
ನೀವು ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಯಾವ ಬಾಲ್ ಬಂದರೂ ಬ್ಯಾಟ್ ಮಾಡುತ್ತೇನೆ ಎಂದು ಹಿಂದೆಯೂ ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಆದಾಗ್ಯೂ ರಾಜಕೀಯ ಬೆಳವಣಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ” ಎಂದರು.