ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಮತ್ತು ಹರ್ಷೇಂದ್ರ ಕುಮಾರ್ ಕುರಿತು ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ವಿಧಿಸಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ತೆರವು ಮಾಡಿದೆ.
ದಕ್ಷಿಣ ಕನ್ನಡದ ಕುಡ್ಲ ರ‍್ಯಾಂಪೇಜ್ ಪ್ರಧಾನ ಸಂಪಾದಕ ಅಜಯ್ ಅವರು ಮಾಧ್ಯಮಗಳ ಮೇಲಿನ ನಿರ್ಬಂಧದ ಆದೇಶ ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿ ಶುಕ್ರವಾರ ಮಹತ್ವದ ಆದೇಶ ನೀಡಿದೆ.
ಇದರಿಂದ ಹರ್ಷೇಂದ್ರ ಕುಮಾರ್ ಅವರಿಗೆ ಹಿನ್ನಡೆಯಾಗಿದೆ. ಧರ್ಮಸ್ಥಳ ಮತ್ತು ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಜುಲೈ 3 ನೇ ವಾರ ಆದೇಶ ಹೊರಡಿಸಿತ್ತು. ಜತೆಗೆ 8 ಸಾವಿರ ಲಿಂಕ್ ಡಿಲೀಟ್‌ಗೆ ಕೋರ್ಟ್ ಸೂಚನೆ ನೀಡಿತ್ತು. ಈ ಮಾಧ್ಯಮಗಳನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಪ್ರಶ್ನೆ ಮಾಡಿ ಯುಟ್ಯೂಬ್ ಚಾನೆಲ್‌ಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ಆ ಬಳಿಕ ಸುಪ್ರಿಂ ಕೋರ್ಟ್ ಹೈಕೋರ್ಟ್‌ಗೆ ತೆರಳಲು ಸೂಚಿಸಿತ್ತು. ಕುಡ್ಲ ರ‍್ಯಾಂಪೇಜ್ ಹೈಕೋರ್ಟ್ ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದೆ.
ಇದೇ ವೇಳೆ, ಸಿವಿಲ್ ದಾವೆ, ಕ್ರಿಮಿನಲ್ ಪ್ರಕ್ರಿಯೆ, ಆರೋಪ, ಪ್ರತ್ಯಾರೋಪದ ಮೇಲೆ ಈ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದೇಶದಲ್ಲಿ ಪರಿಗಣಿಸಿರುವ ಒಂದು ಅಂಶವನ್ನು ಹೊರತುಪಡಿಸಿ ಪಕ್ಷಕಾರರ ನಡುವೆ ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ನ್ಯಾಯಾಲಯವು ಹೇಳಿದೆ.
“ಈ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತು ಇತರೆ ಎಲ್ಲಾ ಪಕ್ಷಕಾರರು ಸಕ್ಷಮ ನ್ಯಾಯಾಲಯಕ್ಕೆ ಆದೇಶ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.