ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಸಂಬಂಧ ನೂರಾರು ದೇಹಗಳನ್ನು ಹೂತು ಹಾಕಿರುವ ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ತೋರಿಸಿದ ಆರನೇ ಜಾಗದಲ್ಲಿ ಗುರುವಾರ ಮೃತದೇಹವೊಂದು ಪತ್ತೆಯಾಗಿದೆ.
ವಿಧಿವಿಜ್ಞಾನ ತಜ್ಞರ ತಂಡವು ಸ್ಥಳದಲ್ಲೇ ಇದ್ದು, ಮೃತದೇಹದ ಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ.
ಮೃತದೇಹ ಪತ್ತೆಗಾಗಿ ಜಾಗ ಅಗೆಯುವ ಕಾರ್ಯ ಗುರುವಾರ ಸತತ ಮೂರನೇ ದಿನವೂ ಮುಂದುವರಿದಿದೆ. ಎಸ್‌ಐಟಿ ತಂಡದ ಜೊತೆ ಸುಮಾರು 20 ಕಾರ್ಮಿಕರು ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ತೆರಳಿದ್ದಾರೆ. ಈ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗಗಳಲ್ಲಿ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ತೋರಿಸಿದ್ದ ಐದು ಕಡೆ ಈಗಾಗಲೇ ನೆಲವನ್ನು ಅಗೆಯಲಾಗಿದೆ.
ದೂರುದಾರ ತೋರಿಸಿದ ಆರನೇ ಜಾಗದಲ್ಲಿ ಆತನ ಸಮ್ಮುಖದಲ್ಲೆ ನೆಲ ಅಗೆಯುವ ಈಗ ನಡೆಯುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೈಲ್ಲಾ ವರ್ಗೀಸ್, ಎಸ್‌ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ಡಿಐಜಿ ಎಂ.ಎನ್.ಅನುಚೇತ್ ಅವರೂ ಸ್ಥಳಕ್ಕಾಗಮಿಲಿದ್ದಾರೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.