Homeಕರ್ನಾಟಕಕಣ್ಣೀರು ಹಾಕುವುದು ದೇವೇಗೌಡರ ಚರಿತ್ರೆ, ಹಾಸನದ ಹೆಣ್ಣು‌ಮಕ್ಕಳು ಕಣ್ಣೀರಿಡುವಾಗ ಎಲ್ಲಿದ್ರು?: ಸಿದ್ದರಾಮಯ್ಯ ಕಿಡಿ

ಕಣ್ಣೀರು ಹಾಕುವುದು ದೇವೇಗೌಡರ ಚರಿತ್ರೆ, ಹಾಸನದ ಹೆಣ್ಣು‌ಮಕ್ಕಳು ಕಣ್ಣೀರಿಡುವಾಗ ಎಲ್ಲಿದ್ರು?: ಸಿದ್ದರಾಮಯ್ಯ ಕಿಡಿ

ದೇವೇಗೌಡರು ಕಣ್ಣೀರು ಹಾಕುವುದೇ ಅವರ ಚರಿತ್ರೆ. ಆದರೆ ಹಾಸನದ ಹೆಣ್ಣು‌ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುವಾಗ ನಿಮ್ಮ ಕಣ್ಣಲ್ಲಿ ನೀರು ಬರಲಿಲ್ಲ ಏಕೆ? ಅಲ್ಲಿಗೆ ಹೋಗಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳ ಪರವಾಗಿ ಕಣ್ಣೀರು ಹಾಕಲಿಲ್ಲ ಏಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಶಿಗ್ಗಾಂವಿಯಲ್ಲಿ ಭಾನುವಾರ ರಾತ್ರಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, “ಮೋದಿಯವರ ಬಗ್ಗೆ ತಾವು ಏನು ಮಾತಾಡಿದ್ರು ಅನ್ನೋದು ಈಗ ದೇವೇಗೌಡರಿಗೆ ಮರೆತು ಹೋಗಿದೆ. ಮೋದಿ ಪ್ರಧಾನಿ ಆದ್ರೆ ದೇಶಬಿಟ್ಟು ಹೋಗ್ತೀನಿ ಅಂದಿದ್ರು. ಈಗ ಸಿದ್ದರಾಮಯ್ಯ ಅವರ ಸರ್ಕಾರ ತೆಗೆಯುವವರೆಗೂ ನಿದ್ದೆ ಮಾಡಲ್ಲ ಅಂತಿದ್ದಾರೆ. ಕಣ್ಣೀರು ಹಾಕುತ್ತಿದ್ದಾರೆ. ಕಣ್ಣೀರು ಹಾಕುವುದೇ ಅವರ ಚರಿತ್ರೆ” ಎಂದು ಟೀಕಿಸಿದರು.

“ಸುಳ್ಳುಗಾರ ಪ್ರಧಾನಿ ಮೋದಿಯವರು ನಮ್ಮ ಮೇಲೆ ಹೊಸ ಸುಳ್ಳಿನ ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಿಂದ 700 ಕೋಟಿ ತಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ಮಾಡುತ್ತಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದಾರೆ. ಮೋದಿ ಅವರು ಹೇಳಿದ್ದು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಘೋಷಿಸುವೆ. ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ” ಎಂದು ಪ್ರಧಾನಿ ಮೋದಿಯವರಿಗೆ ಸಿಎಂ ನೇರ ಸವಾಲು ಹಾಕಿದರು.

“ಮೋದಿಯವರು ಕುಟುಂಬ ರಾಜಕಾರಣದ ಬಗ್ಗೆ ಭಯಾನಕ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ನೀಡಿದ್ದೀರಲ್ಲಾ ಇದು ಕುಟುಂಬ ರಾಜಕಾರಣ ಅಲ್ವಾ?” ಎಂದು ಕೇಳಿದರು.

“ಮಾಜಿ ಪ್ರಧಾನಿ ದೇವೇಗೌಡರು, ಇವರ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರೆಲ್ಲಾ ಆಯ್ತು. ಈಗ ಕುಮಾರಸ್ವಾಮಿ ದಂಪತಿ ಪುತ್ರ ನಿಖಿಲ್ ಕುಮಾರಸ್ವಾಮಿ, ರೇವಣ್ಣ ದಂಪತಿ ಪುತ್ರರಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ…ಇವರೆಲ್ಲಾ ಏನು ಮೋದಿಯವರೇ? ಇವರೆಲ್ಲಾ ಕುಟುಂಬ ರಾಜಕಾರಣ ಮಾಡ್ತಿಲ್ವಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಭಾಷಣ ಮಾಡೋದು ಸುಲಭ ಮೋದಿಯವರೇ. ನುಡಿದಂತೆ ನಡೆಯೋದು ನಿಮ್ಮಿಂದ ಆಗಲ್ಲ” ಎಂದರು.

“ಈ ಬಾರಿ ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ನೂರಕ್ಕೆ ನೂರು ಗೆಲ್ತಾರೆ. ಕಳೆದ ಚುನಾವಣೆಯ ಕತೆಯೇ ಬೇರೆ-ಈ ಚುನಾವಣೆಯ ಫಲಿತಾಂಶವೇ ಬೇರೆ ಆಗತ್ತೆ. ಕಳೆದ ಚುನಾವಣೆಯಲ್ಲಿ ಕಡೆ ಗಳಿಗೆಯಲ್ಲಿ ಪಠಾಣ್ ಅವರಿಗೆ ಟಿಕೆಟ್ ನೀಡಿದೆವು. ನಾನಾಗಲೀ, ನಮ್ಮ ಪಕ್ಷದ ಮುಖಂಡರಾಗಲಿ ಪ್ರಚಾರಕ್ಕೆ ಬರಲಾಗಲಿಲ್ಲ. ಅದಕ್ಕೇ ಪಠಾಣ್ ಅವರಿಗೆ ಹಿನ್ನಡೆ ಆಯಿತು. ಈ ಚುನಾವಣೆಯಲ್ಲಿ ಪಠಾಣ್ ಅವರನ್ನು ಗೆಲ್ಲಿಸಲೇಬೇಕು ಎಂದು ನಾನು ತೀರ್ಮಾನ ಮಾಡಿದ್ದೇನೆ. ಡಿಸಿಎಂ ಡಿ.ಕೆ.ಶಿವಕುಮಾರ್ , ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲರು, ಹೆಚ್.ಕೆ.ಪಾಟೀಲರು ಸೇರಿ ಪ್ರತಿಯೊಬ್ಬರೂ ತೀರ್ಮಾನ ಮಾಡಿ ಆಗಿದೆ. ಆದ್ದರಿಂದ ಪಠಾಣ್ ಅವರನ್ನು ಶಿಗ್ಗಾಂವಿ ಜನ ಈ ಬಾರಿ ಗೆಲ್ಲಿಸ್ತಾರೆ. ಇದರಲ್ಲಿ ಎಳ್ಳಷ್ಟೂ ಅನುಮಾನ ಬೇಡ” ಎಂದರು.

ಕೋವಿಡ್ ಸಂದರ್ಭದಲ್ಲೂ ಲೂಟಿ ಮಾಡಿದವರು ನಿಮಗೆ ಬೇಕಾ?

“ಕೊರೋನಾ ಸಂದರ್ಭದಲ್ಲಿ ಇಡೀ ರಾಜ್ಯದ ಜನರ ಪರಿಸ್ಥಿತಿ ಹೇಗಿತ್ತು ಅಂತ ನಮಗೂ ಗೊತ್ತು, ನಿಮಗೂ ಗೊತ್ತು. ಇಂಥಾ ಸಂದರ್ಭದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಸುಧಾಕರ್ ಚೀನಾ ಜೊತೆಗೆ ವ್ಯವಹಾರ ಮಾಡಿ ಪಿಪಿಇ ಕಿಟ್ ಖರೀದಿ ಸೇರಿ ಕಮಿಷನ್ ತಿಂದಿದ್ದು, ದುಡ್ಡು ಲೂಟಿ ಮಾಡಿದ್ದು ವರದಿ ಆಗಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊಡದೆ 39 ಜನರ ಸಾವಿಗೆ ಕಾರಣರಾದ ಇವರಿಗೆಲ್ಲಾ ಕ್ಷಮೆ ಇದೆಯಾ? ಇವರನ್ನು ಕ್ಷಮಿಸಿ ಮತ ಹಾಕಿದ್ರೆ ನಿಮ್ಮ ಮತಗಳಿಗೆ ಗೌರವ ಬರುತ್ತದಾ ಯೋಚಿಸಿ” ಎಂದು ಹೇಳಿದರು.

ವಕ್ಫ್: ಬಿಜೆಪಿ ತಾನೇ ಪ್ರಣಾಳಿಕೆಯಲ್ಲಿ ಹೇಳತ್ತೆ, ತಾನೇ ಪ್ರತಿಭಟನೆ ಮಾಡತ್ತೆ

“ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿತ್ತು. ಬಿಜೆಪಿ ಸರ್ಕಾರವೇ ಒತ್ತುವರಿ ತೆರವುಗೊಳಿಸಿ ಎಂದು 216 ಮಂದಿಗೆ ನೋಟಿಸ್ ನೀಡಿತ್ತು. ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಾ ಪ್ರತಿಭಟನೆ ನಡೆಸುತ್ತಿದೆ. ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದು ನಮ್ಮ‌ ಸರ್ಕಾರ. ನೋಟಿಸ್ ವಾಪಾಸ್ ಪಡೆಯುವಂತೆ ನಮ್ಮ ಸರ್ಕಾರ ಅಧಿಕೃತ ಸುತ್ತೋಲೆ ಕೂಡ ಹೊರಡಿಸಿ ಆಗಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments