ದೇವರಾಜೇಗೌಡನ ಬಳಿ ಆರೋಪಗಳ ಬಗ್ಗೆ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಆತ ಮಾನಸಿಕ ಸಮಸ್ಯೆ ಎದುರಿಸುತ್ತಿರಬೇಕು. ಅವನಂತಹ ಮೆಂಟಲ್ ಗಿರಾಕಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ದೇವರಾಜೇಗೌಡ ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ನಿಮ್ಮ (ಮಾಧ್ಯಮ) ಬಗ್ಗೆ ಅನುಕಂಪವಿದೆ. ಮಾಧ್ಯಮದವರು ವಿದ್ಯಾವಂತರು, ಪ್ರಜ್ಞಾವಂತರಿದ್ದೀರಿ. ಯಾರೋ ಏನೋ ಹೇಳುತ್ತಾರೆ ಎಂದು ಇಂತಹ ವಿಚಾರ ಹಾಕಿಕೊಂಡು ಕೂತರೆ, ನಿಮ್ಮ ಘನತೆ ಏನಾಗಬೇಕು. ಅವನ ಹೇಳಿಕೆಯಲ್ಲಿ ಸತ್ಯ ಇದೆಯೇ, ಇಲ್ಲವೆ ಎಂದು ಪರಿಶೀಲಿಸಬೇಕಲ್ಲವೇ? ಯಾರಾದರೂ ಆರೋಪ ಮಾಡುವಾಗ ಅದಕ್ಕೆ ಆಧಾರ ಇರಬೇಕಲ್ಲವೇ? ತಲೆಕೆಟ್ಟು, ಆಸ್ಪತ್ರೆ ಸೇರಬೇಕಾದವರ ಮಾತಿಗೆ ಇಷ್ಟು ಪ್ರಾಮುಖ್ಯತೆ ನೀಡುವುದು ಸರಿಯಲ್ಲ” ಎಂದು ತಿಳಿಸಿದರು.
ನೀವು ಆ ವ್ಯಕ್ತಿ ಜತೆ ಮಾತನಾಡಿರುವುದಕ್ಕೆ ಮಾಧ್ಯಮಗಳು ಆ ವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸಿವೆ ಎಂದು ಕೇಳಿದಾಗ, “ನಾನು ಆ ವ್ಯಕ್ತಿ ಜತೆ ವಿಶೇಷವಾಗಿ ಮಾತನಾಡಿಲ್ಲ. ನಾನು ಡಿಸಿಎಂ ಆಗಿದ್ದು ನೂರಾರು ಜನ ಬಂದು ನಮ್ಮನ್ನು ಸಂಪರ್ಕಿಸುತ್ತಾರೆ. ಒಳ್ಳೆಯವರು, ಕೆಟ್ಟವರು ಎಲ್ಲರೂ ಬರುತ್ತಾರೆ. ನನ್ನ ಬಳಿ ಬಂದು ಮಾತನಾಡುತ್ತೇನೆ ಎನ್ನುವವರನ್ನು ಬೇಡ ಎಂದು ಹೇಳಲು ಆಗುವುದಿಲ್ಲ” ಎಂದರು.
“ನನ್ನ ಬಳಿ ಬರುವವರನ್ನು ಸತ್ಯವಂತರು, ಸುಳ್ಳು ಹೇಳುವವರು ಎಂದು ಪರಿಶೀಲಿಸಿಕೊಂಡು ಕೂರಲು ಸಾಧ್ಯವೇ. ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ಮಾತನಾಡಿಲ್ಲ. ಹೀಗಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ನನ್ನದೇ ಆದ ಕೆಲಸ ಕಾರ್ಯಗಳಿವೆ. ನಮ್ಮ ಹೆಸರು ಬಳಸಿಕೊಂಡರೆ ಕೆಲವರಿಗೆ ಮಾರ್ಕೆಟ್ ಸಿಗುತ್ತದೆ. ಹೀಗಾಗಿ ಬಳಸಿಕೊಳ್ಳುತ್ತಾರೆ” ಎಂದು ಹೇಳಿದರು.
ಪೆನ್ ಡ್ರೈವ್ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದು, ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ದೇವೇಗೌಡರು ಜನ್ಮದಿನ ಪ್ರಯುಕ್ತ ದೇವಾಲಯಕ್ಕೆ ಹೋಗಿದ್ದಾರೆ. ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ, ಸಂತೋಷ ಸಿಗಲಿ. ಅವರ ದುಃಖ ದೂರವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ತುಂಬು ಹೃದಯದಿಂದ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ.” ಎಂದರು.
ಪ್ರಜ್ವಲ್ ರೇವಣ್ಣ ಇನ್ನು ಬಂಧನವಾಗಿಲ್ಲ, ಸಂತ್ರಸ್ತೆಯರಿಗೆ ನ್ಯಾಯ ಸಿಗುತ್ತದೆಯೇ ಎಂದು ಕೇಳಿದಾಗ, “ಇಷ್ಟು ದಿನವೂ ಪೆನ್ ಡ್ರೈವ್ ಬಗ್ಗೆ ಚರ್ಚೆಯಾಗುತ್ತಿದೆಯೇ ಹೊರತು ಸಂತ್ರಸ್ತೆಯರ ಬಗ್ಗೆ, ಅವರಿಗಾಗಿರುವ ಅನ್ಯಾಯದ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಎಸ್ಐಟಿ ಸಮರ್ಥವಾಗಿ ತನಿಖೆ ನಡೆಸಿ ಸಂತ್ರಸ್ತೆಯರಿಗೆ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸ ನನಗಿದೆ. ಸಂತ್ರಸ್ತೆಯರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.