ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ವಸತಿ ಶಾಲೆಯ ಮಾಲೀಕ ಧನಂಜಯ್ (A1) ಮತ್ತು ಅವರ ಪತ್ನಿ ಶೈಲಜಾ (A2) ವಿರುದ್ಧ ಪೋಕ್ಸೋ ಕಾಯ್ದೆಯಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಬಾಲಕಿಯರಿಗೆ ಅದರ ಮಾಲೀಕನೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಧನಂಜಯ್ ರಾತ್ರಿವೇಳೆ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗೆ ತೆರಳಿ, ಒಮ್ಮೊಮ್ಮೆ ವಾರ್ಡನ್ ಕೊಠಡಿಗೆ ಕರೆಸಿ ಕಿರುಕುಳ ನೀಡುತ್ತಿದ್ದ. ತಾತನ ವಯಸ್ಸಾಗಿದ್ದರೂ ಪುಟ್ಟ ಬಾಲಕಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದವನ ಕರ್ಮಕಾಂಡವನ್ನು ಸಹಿಸಲಾಗದ ಮಕ್ಕಳು ಆತನ ಪತ್ನಿ ಶೈಲಜಾಗೆ ಈ ಬಗ್ಗೆ ಹೇಳಿದ್ದರು. ಆದರೆ ಆಕೆಯೂ ಗಂಡನ ನೀಚ ಕೃತ್ಯಕ್ಕೆ ಸಾಥ್ ನೀಡಿ, ಕಿರುಕುಳದ ಬಗ್ಗೆ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನರಕದಲ್ಲಿ ಬೇಯುತ್ತಿದ್ದ ಬಾಲಕಿಯರ ಮೇಲೆ ಒತ್ತಡ ಹೇರಿದ್ದ ದಂಪತಿ, ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದ ಕುರಿತು ಯಾರ ಬಳಿಯೂ ಹೇಳದಂತೆ ಒತ್ತಡ ಹೇರುತ್ತಿದ್ದರು. ಅದರಲ್ಲಿಯೂ ಪಾಲಕರಿಗೆ ಸುದ್ದಿ ಮುಟ್ಟಿಸಬಾರದೆಂದು ಸತತ 8 ದಿನ ಹೊರಗೆ ಹೋಗಲೂ ಬಿಡದೆ, ಪೋಷಕರಿಗೆ ಕರೆ ಮಾಡಲೂ ಬಿಡದೆ ಕಿರುಕುಳ ನೀಡಿದ್ದರು ಎಂದು ಬಾಲಕಿಯರು ಹೇಳಿದ್ದಾರೆ. ಅದಾದ ಬಳಿಕ ನಿನ್ನೆ (ಫೆ.27) ಪೋಷಕರಿಗೆ ಕರೆ ಮಾಡಿದ ಬಾಲಕಿಯರು ತಮ್ಮ ಮೇಲಾದ ದೌರ್ಜನ್ಯವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ಶಾಲೆ ಬಳಿ ಬಂದ ಬಾಲಕಿಯರ ಪೋಷಕರು ದಂಪತಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


