Homeಕರ್ನಾಟಕಬಿಜೆಪಿಯ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ತಲುಪಿವೆ, ಯೋಜನೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ

ಬಿಜೆಪಿಯ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ತಲುಪಿವೆ, ಯೋಜನೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ

ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿ ಯೋಜನೆಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ 54,374 ಕೋಟಿ ರೂ. ಖರ್ಚು ಮಾಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದೆವು. ಆದರೆ, 56,274 ಕೋಟಿ ರೂ. ಖರ್ಚು ಮಾಡಿದ್ದೇವೆ. ಅಂದರೆ ಬಜೆಟ್‌ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ‌ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾಧ್ಯಮ‌ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಬಿ ವೈ ವಿಜಯೇಂದ್ರ, ಆರ್.ಅಶೋಕ್, ಮಾಜಿ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರಿಗೆ ಆರ್ಥಿಕತೆ ಅರ್ಥ ಆಗಲ್ಲ. ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ. ನೀರಾವರಿಗೆ 16,360 ಕೋಟಿ ಖರ್ಚು ಮಾಡುವುದಾಗಿ ಬಜೆ‌ಟ್‌ನಲ್ಲಿ ಹೇಳಿದ್ದೆವು. ಆದರೆ 18,198 ಕೋಟಿ ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ 9,661 ಕೋಟಿ ಖರ್ಚು ಮಾಡಿದ್ದೇವೆ. ಬಿಜೆಪಿಯವರ ಹೇಳಿಕೆಯಂತೆ ಖಜಾನೆ ಖಾಲಿ ಆಗಿದ್ದರೆ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವಿತ್ತೇ” ಎಂದು ಪ್ರಶ್ನಿಸಿದರು.

“ಸಮಾಜ ಕಲ್ಯಾಣಕ್ಕಾಗಿ ಪರಿಶಿಷ್ಟ ಜಾತಿ/ವರ್ಗದ ಗುತ್ತಿಗೆದಾರರಿಗೆ ಒಂದು ಕೋಟಿವರೆಗಿನ ಕಾಮಗಾರಿಗೆ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ನೀಡಿದೆವು. SCSP/TSP ಕಾಯ್ದೆ ಮಾಡಿದ್ದು ನಮ್ಮ ಸರ್ಕಾರ. ಮೋದಿ ಭಾಷಣದಲ್ಲಿ ಸುಳ್ಳು ಹೇಳುವುದನ್ನು ಬಿಟ್ಟು ಈ ಕಾಯ್ದೆಯನ್ನು ಬಿಜೆಪಿ ಆಡಳಿತದ ಸರ್ಕಾರಗಳು ಏಕೆ ಜಾರಿ ಮಾಡಿಲ್ಲ ಎನ್ನುವುದಕ್ಕೆ ಉತ್ತರಿಸಲಿ” ಎಂದು ಸವಾಲು ಹಾಕಿದರು.

ಮುಸ್ಲಿಂ ಮೀಸಲಾತಿ; ಮೋದಿಯಿಂದ ಅಪ್ಪಟ ಸುಳ್ಳು

“ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡ್ತಾರೆ ಎಂದು ಮತ್ತೊಂದು ಮೋದಿ ಸುಳ್ಳು ಹೇಳುತ್ತಿದ್ದಾರೆ. ಇದು ಅಪ್ಪಟ ಸುಳ್ಳು. ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ 30 ವರ್ಷದಿಂದ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಜಾರಿಯಲ್ಲಿದೆ. ಬೊಮ್ಮಾಯಿ ಸರ್ಕಾರ ಕೂಡ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿ ಮುಸ್ಲಿಮರ ಮೀಸಲಾತಿ ರದ್ದು ಮಾಡುವುದಿಲ್ಲ ಎಂದು ಒಪ್ಪಿಕೊಂಡಿದೆ. ಆದರೂ ಮೋದಿ ಭಾಷಣಗಳಲ್ಲಿ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ. ಹೀಗಾಗಿ ಮೋದಿ ಹೇಳುತ್ತಿರುವುದು ಅಪ್ಪಟ ಸುಳ್ಳು” ಎಂದರು.

“ಬಿಜೆಪಿಯ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ನರಳುತ್ತಿದ್ದ ಮಧ್ಯಮ ವರ್ಗ ಮತ್ತು ಬಡವರ ಕೊಳ್ಳುವ ಶಕ್ತಿ ಹೆಚ್ಚಿಸಲು ಗ್ಯಾರಂಟಿಗಳನ್ನು ಘೋಸಿಸಿದ್ದೆವು. ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆ, ಗ್ಯಾರಂಟಿಗಳ ಜಾರಿಗೆ ಕ್ರಮ ತೆಗೆದುಕೊಂಡು ಐದಕ್ಕೆ ಐದೂ ಜಾರಿ ಮಾಡಿದ್ದೇವೆ. ಅನ್ನಭಾಗ್ಯ ಯೋಜನೆಗೆ ನಾವು ಹಣ ಕೊಟ್ಟರೂ ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಸತಾಯಿಸಿತು. ಅಕ್ಕಿ ಸಂಗ್ರಹ ಇದ್ದರೂ ಕೊಡಲಿಲ್ಲ. ಅಕ್ಕಿ ಕೊಡದೆ ಇರಲು ಮೇಲಿನಿಂದ ಆದೇಶ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಹೀಗಾಗಿ ಹಣ ಕೊಟ್ಟೆವು. ಗ್ಯಾರಂಟಿ ಯೋಜನೆಗಳನ್ನು ನಾವು ನಿಲ್ಲಿಸುವುದಿಲ್ಲ” ಎಂದು ತಿಳಿಸಿದರು.

ಭ್ರಷ್ಟಾಚಾರ ನಿಂತಿಲ್ಲ

“ನಮ್ಮ ಕಾಲದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿಂತಿದೆ ಎಂದು ಹೇಳೋದಿಲ್ಲ. ಆದರೆ ಪ್ರಮಾಣ ಕಡಿಮೆ ಮಾಡಲು ನಿಷ್ಠುರವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. 40% ತನಿಖೆಗೆ ಶುರು ಮಾಡಿಸಿದ್ದೇವೆ” ಎಂದು ಹೇಳಿದರು.

“ಹೆಚ್ಚು ಆದಾಯ ಬರುವ ದೇವಸ್ಥಾನಗಳ ಹಣವನ್ನು ಗ್ರಾಮೀಣ ಭಾಗದ ದೇವಸ್ಥಾನಗಳ ಅಭಿವೃದ್ಧಿಗೆ ಕೊಡಲು ಯೋಚಿಸಿದೆವು. ಆದರೆ ಹಣ ಕಿತ್ತುಕೊಳ್ಳುತ್ತಿದ್ದಾರೆ ಎಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿದರು. ಆದರೆ ಗ್ರಾಮೀಣ ಭಾಗದ ದೇವಸ್ಥಾನಗಳ ಅಭಿವೃದ್ಧಿಗೆ ನಾವು ಮುಂದಾಗಿದ್ದೇವೆ ಎನ್ನುವ ಸತ್ಯ ಮರೆಮಾಚಿ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

“ಜಾತಿಗಣತಿ ವರದಿ ಸ್ವೀಕರಿಸಬೇಡಿ ಎಂದು ಒತ್ತಡ ಹೇರಿದರು. ಆದರೆ, ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಮೌಲ್ಯ ಕಾಪಾಡಲು ವರದಿ ಸ್ವೀಕರಿಸಿದೆವು. ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರನ್ನು ಪತ್ತೆ ಹಚ್ಚಲು ಜಾತಿ ಗಣತಿ,ಸಾಮಾಜಿಕ ಆರ್ಥಿಕ ಸಮೀಕ್ಷೆ ಅತ್ಯಗತ್ಯ. ಹೀಗಾಗಿಯೇ ನಾವು ಜಾತಿಗಣತಿ ಮಾಡಿಸಿ ವರದಿ ಸ್ವೀಕರಿಸಿದೆವು. ಈ ವರದಿ ಯಾವುದೇ ಸಮುದಾಯಕ್ಕೂ ತೊಂದರೆ ಮಾಡುವುದಿಲ್ಲ” ಎಂದರು.

“ಮೋದಿ ಆರ್ಥಿಕವಾಗಿ ಹಿಂದುಳಿದವರಿಗಾಗಿ EWS ಮೀಸಲಾತಿ ಜಾರಿತಂದರು. ಇಡೀ ದೇಶದಲ್ಲಿ ಮೀಸಲಾತಿಯ ಅನುಕೂಲ ಪಡೆಯದ ಯಾವುದೇ ಜಾತಿ, ವರ್ಗಗಳಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಮಾಡುತ್ತೇವೆ ಎಂದು ಘೋಷಿಸಿದ್ದು ಇದೇ ಕಾರಣಕ್ಕೆ. ಇದರಲ್ಲಿ ಏನು ತಪ್ಪಿದೆ” ಎಂದು ಸಿಎಂ ಪ್ರಶ್ನಿಸಿದರು.

ಪೆನ್ ಡ್ರೈವ್ ಪ್ರಕರಣ: ಆರೋಪಿಗಳಿಗೆ ಶಿಕ್ಷೆ ಆಗುತ್ತದೆ

“ಬಿಜೆಪಿಯ ದೇವರಾಜೇಗೌಡ ಅವರೇ ಮೊದಲಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಅತ್ಯಾಚಾರಕ್ಕೆ ಒಳಗಾದವರು ದೂರು ಕೊಟ್ಟರು. ಆರು ತಿಂಗಳ ಮೊದಲೇ ಬಿಜೆಪಿಗೆ ವಿಷಯ ಗೊತ್ತಿತ್ತು. ಆದರೂ ಬಿಜೆಪಿ ಪ್ರಜ್ವಲ್ ಗೆ NDA ಟಿಕೆಟ್ ನೀಡಿತು. ಮೋದಿ ಬಂದು ಪ್ರಜ್ವಲ್ ಗೆಲ್ಲಿಸಲು ಭಾಷಣ ಮಾಡಿದರು. ನಾವು ಯಾರ ಪರವೂ ಇಲ್ಲ. ಆರೋಪಿಗಳಿಗೆ ಶಿಕ್ಷೆ ಆಗುತ್ತದೆ” ಎಂದು ಭರವಸೆ ನೀಡಿದರು.

ನೀವು ಪ್ರಧಾನ ಮಂತ್ರಿ ಆಗ್ತೀರಾ? ಸಿಎಂ ಉತ್ತರವೇನು?

“ದೇಶದಲ್ಲಿ ಗುಜರಾತ್ ಮಾದರಿಯೇ ಇಲ್ಲ. ಅದು ಸುಳ್ಳು ಎನ್ನುವುದು ಸಾಬೀತಾಗಿದೆ. ನಾವು ಐದು ಗ್ಯಾರಂಟಿಗಳನ್ನು ಘೋಷಿಸಿ, ಜಾರಿ ಮಾಡಿದ್ದರಿಂದ ದೇಶದಲ್ಲಿ ಕರ್ನಾಟಕ ಮಾಡೆಲ್ ಜಾರಿಯಲ್ಲಿದೆ. ಕೆಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು ನಮ್ಮ ಕಾರ್ಯಕ್ರಮಗಳ ಜಾರಿ ಆಧಾರದಲ್ಲಿ ಚರ್ಚಿಸಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ” ಎಂದರು.

ರಾಜ್ಯದಲ್ಲಿ ಕನಿಷ್ಠ 15 ಸ್ಥಾನ, ಗರಿಷ್ಠ 20 ಸ್ಥಾನ ಗೆಲ್ತೀವಿ

“ಬಿಜೆಪಿಯವರಂತೆ 28 ಗೆಲ್ತೀವಿ ಅಂತ ನಾನು ಹೇಳುವುದಿಲ್ಲ. ರಾಜ್ಯದಲ್ಲಿ ಕನಿಷ್ಠ 15 ಸ್ಥಾನ, ಗರಿಷ್ಠ 20 ಸ್ಥಾನ ಗೆಲ್ತೀವಿ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸಂಪುಟ ಆಗುತ್ತಾ ಇಲ್ವಾ ಎಂಬುದು ಚರ್ಚೆ ಆಗಿಲ್ಲ. ಆದರೆ ಹೈಕಮಾಂಡ್ ನಿರ್ದೇಶನದಂತೆ ನಮ್ಮ ಪಕ್ಷದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದರು.

ಮಾಧ್ಯಮ ಸಂವಾದದಲ್ಲಿ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌ ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಪಿ ಬಿ ಮಲ್ಲಪ್ಪ ಸೇರಿದಂತೆ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments