ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ (ಫೆ.8) ಹೊರಬಿದ್ದಿದ್ದು, ಬರೋಬ್ಬರಿ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಅಧಿಕಾರ ಗದ್ದುಗೆ ಬಿಜೆಪಿ ಪಾಲಾಗಿದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಸಿಹಿ ಹಂಚಿ, ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದ ದೆಹಲಿಯ ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೇ ಸೋಲು ಅನುಭವಿಸಿದ್ದಾರೆ. ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಪರ್ವೇಶ್ ವರ್ಮಾ ಗೆಲುವು ಸಾಧಿಸಿದ್ದು, ಇವರೇ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ ಈ ಸ್ಥಾನಗಳನ್ನು ಭದ್ರಬಡಿಸಿಕೊಂಡಿದೆ. 48 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. 22 ಕ್ಷೇತ್ರಗಳಲ್ಲಿ ಎಎಪಿ ಮುಂದಿದೆ. ಸಂಜೆ ಹೊತ್ತಿಗೆ ಸ್ಪಷ್ಟ ಅಂಕಿ-ಅಂಶ ಹೊರಬೀಳಲಿದ್ದು, ಐದಾರೂ ಸ್ಥಾನಗಳು ಆಚೆ ಈಚೆ ಆದರೂ ಬಿಜೆಪಿ ಗೆಲುವು ಪಕ್ಕಾ ಆಗಿದೆ.
2013ರ ಚುನಾವಣೆಯಲ್ಲಿ ಬಿಜೆಪಿ 31 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಅಧಿಕಾರದಿಂದ ದೂರ ಉಳಿದಿತ್ತು. 2015ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಬಿಜೆಪಿ 3 ಸ್ಥಾನಗಳನ್ನು ಪಡೆದಿತ್ತು.
ಕಾಂಗ್ರೆಸ್ ಶೂನ್ಯ
15 ವರ್ಷಗಳ ಕಾಲ ರಾಷ್ಟ್ರ ರಾಜಧಾನಿಯನ್ನು ಆಳಿದ ಕಾಂಗ್ರೆಸ್ 2013ರ ವಿಧಾನಸಭಾ ಚುನಾವಣೆಯಲ್ಲಿ 8 ಸ್ಥಾನಗಳನ್ನು ಪಡೆದಿತ್ತು. 28 ಕ್ಷೇತ್ರಗಳಲ್ಲಿ ಗೆದಿದ್ದ ಎಎಪಿಗೆ ಬೆಂಬಲ ನೀಡಿತ್ತು. ಆದರೆ, ಕೆಲವೇ ದಿನಗಳಲ್ಲಿ ಮೈತ್ರಿ ಮುರಿದು ಹೋಗಿತ್ತು. 2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 67 ಸ್ಥಾನಗಳನ್ನು ಗೆದ್ದು ಹೊಸ ದಾಖಲೆ ಬರೆದಿತ್ತು. ಕಾಂಗ್ರೆಸ್ ಆಗ ಶೂನ್ಯ ಸಂಪಾದನೆ ಮಾಡಿತ್ತು.
2020ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದು ಎರಡನೇ ಸಲ ಅಧಿಕಾರ ಹಿಡಿದಿತ್ತು. ಬಿಜೆಪಿ 8 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ ಆಗಲೂ ಶೂನ್ಯ ಸಂಪಾದನೆ ಮಾಡಿತ್ತು. 2025ರ ಚುನಾವಣೆಯಲ್ಲೂ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡುವ ಸಾಧ್ಯತೆ ಕಾಣುತ್ತಿದೆ.

ಎಎಪಿಯ ದಿಗ್ಗಜ ನಾಯಕರಿಗೆ ಸೋಲು
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ಹೀನಾಯ ಸೋಲು ಅನುಭವಿಸಿದೆ. ಪಕ್ಷದ ಸಂಸ್ಥಾಪಕ ನಾಯಕರಾದ ಮಾಜಿ ಮಖ್ಯಮಂತ್ರಿ ಅರವಿಂದ ಕೇಜ್ರವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೋಲನುಭವಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅತಿಶಿ ಗೆಲುವು
ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅತಿಶಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಸಂಸದ ರಮೇಶ್ ಬಿಧೂಡಿ ಹಾಗೂ ಕಾಂಗ್ರೆಸ್ ಅಲ್ಕಾ ಲಂಬಾಗೆ ಸೋಲುಣಿಸಿದ್ದಾರೆ. 2020ರ ಚುನಾವಣೆಯಲ್ಲೂ ಅತಿಶಿ ಇಲ್ಲಿ ಗೆಲುವು ಸಾಧಿಸಿದ್ದರು.
‘ಈರುಳ್ಳಿ’ಯಿಂದ ಹೋದ ಅಧಿಕಾರ ‘ಗ್ಯಾರಂಟಿ’ಗಳಿಂದ ಬಂತು!
ದೆಹಲಿಯಲ್ಲಿ ಬಿಜೆಪಿ ಕೊನೆಯ ಬಾರಿಗೆ ಸರ್ಕಾರ ನಡೆಸಿದ್ದು 1998ರಲ್ಲಿ. ಆಗ್ ದೇಶದ ಪ್ರಧಾನಿ ವಾಜಪೇಯಿ ಇದ್ದರು. ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿತ್ತು. ದೆಹಲಿ ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ ತಣಿಸಲು ಕೇಂದ್ರ ಮಂತ್ರಿಯಾಗಿದ್ದ, ಆಗಿನ ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿ ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.
ಸುಷ್ಮಾ ಸ್ವರಾಜ್ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದರು. ಆದರೆ, ಅವರು ಅಧಿಕಾರ ನಡೆಸಿದ್ದು ಕೇವಲ 52 ದಿನಗಳು ಮಾತ್ರ. ನಂತರ ಅವರು ಚುನಾವಣೆಯಲ್ಲಿ ಸೋತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.
ಸಿಎಂ ಸುಷ್ಮಾ ಸ್ವರಾಜ್ ಉಳ್ಳಾಗಡ್ಡಿ ಬೆಲೆಯನ್ನು ಬೆಲೆಯನ್ನು ಕಡಿಮೆ ಮಾಡಿ, ಸಾರ್ವಜನಿಕರಿಗೆ ಕೆಜಿಗೆ 5 ರೂಪಾಯಿಯಂತೆ ಈರುಳ್ಳಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ದಿಲ್ಲಿ ಜನ ಇವರ ಭರವಸೆಯನ್ನು ನಂಬಿರಲಿಲ್ಲ. ಬದಲಾಗಿ ಕಾಂಗ್ರೆಸ್ನ ಶೀಲಾ ದೀಕ್ಷಿತ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದರು.
ತರಕಾರಿ ಬೆಲೆ ಏರಿಕೆ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿತ್ತು. ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿ ಟ್ರಂಪ್ ಕಾರ್ಡ್ ಆಗಿ ಬಳಕೆ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ ಬರೊಬ್ಬರಿ 52 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಶೀಲಾ ದೀಕ್ಷಿತ್ ಅವರು ಸತತ 15 ವರ್ಷಗಳ ಕಾಲ ಆಡಳಿತ ನಡೆಸಿದರು.
ಅರವಿಂದ್ ಕೇಜ್ರಿವಾಲ್ ಅವರ ಉಚಿತ ಕೊಡುಗೆಗಳಿಗೆ ಮುಂದೆ ಮೋದಿ ಗ್ಯಾರಂಟಿಗಳ ಅಸ್ತ್ರದ ಮೂಲಕವೇ ದೆಹಲಿ ಅಧಿಕಾರ ಹಿಡಿಯುವ ಸಾಧ್ಯತೆ ಕಾಣುತ್ತಿದೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು 500 ರೂ.ಗೆ ನೀಡಿವುದು, ವೃದ್ಧಾಪ್ಯ ಪಿಂಚಣಿ 2,500ಕ್ಕೆ ಹೆಚ್ಚಳ ಹಾಗೂ ಮಹಿಳೆಯರಿಗೆ ತಿಂಗಳಿಗೆ 2,500 ರೂ. ನೀಡುವುದಾಗಿ ಘೋಷಣೆ ಮಾಡಿತ್ತು. ದೆಹಲಿ ಮತದಾರರು ಬಿಜೆಪಿಯ ಗ್ಯಾರಂಟಿಗಳಿಗೆ ಮನಸೋತಿರುವುದು ಫಲಿತಾಂಶದಲ್ಲಿ ಕಾಣುತ್ತಿದೆ.
ಕೇಜ್ರಿವಾಲ್ ಹೇಳಿದ್ದೇನು?
ದೆಹಲಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಎಎಪಿ, 10 ವರ್ಷಗಳ ಬಳಿಕ ಅಧಿಕಾರ ಗದ್ದುಗೆ ಕಳೆದುಕೊಂಡಿದೆ. ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್, “ತೀರ್ಪನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇವೆ” ಎಂದು ಹೇಳಿದ್ದಾರೆ.
“ನಮ್ಮ ಪಕ್ಷವು ಅಧಿಕಾರಕ್ಕಾಗಿ ರಾಜಕೀಯದಲ್ಲಿಲ್ಲ. ಎಎಪಿ ರಚನಾತ್ಮಕ ವಿರೋಧ ಪಕ್ಷದ ಪಾತ್ರ ನಿರ್ವಹಿಸುತ್ತದೆ. ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತದೆ. ಜನರ ನಿರ್ಧಾರವು ಅತ್ಯಂತ ಮುಖ್ಯ. ಬಿಜೆಪಿಯ ಗೆಲುವಿಗೆ ನಾನು ಅಭಿನಂದಿಸುತ್ತೇನೆ. ಅವರಿಗೆ ಬಹುಮತವನ್ನು ನೀಡಿದ ಜನರ ಆಶಯಗಳು ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಬಿಜೆಪಿ ಕೆಲಸ ಮಾಡುತ್ತದೆ ಎಂದು ಭಾವಿಸುತ್ತೇನೆ” ಎಂದು ತಿಳಿಸಿದ್ದಾರೆ.