ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಎಎಪಿಯ ಪ್ರಮುಖರಿಗೆ ಹಿನ್ನಡೆ ಉಂಟಾಗಿದೆ.
48 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಎಎಪಿ 21 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುಂದಿದೆ. ಎಎಪಿ ಸಂಚಾಲಕ ಅರವಿಂದ ಕೇಜ್ರವಾಲ್, ಮನೀಷ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಹಿನ್ನಡೆಯಲ್ಲಿದ್ದಾರೆ. ಮುಖ್ಯಮಂತ್ರಿ ಅತಿಶಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮತ ಎಣಿಕೆ ಕಾರ್ಯ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಎಎಪಿ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ 27 ವರ್ಷಗಳ ನಂತರ ಬಿಜೆಪಿ ಸರ್ಕಾರ ರಚಿಸುತ್ತದೆಯೇ ಎಂಬುದು ಮಧ್ಯಾಹ್ನದ ಹೊತ್ತಿಗೆ ಗೊತ್ತಾಗಲಿದೆ.
ದೆಹಲಿಯ ಎಲ್ಲ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5 ರಂದು ಮತದಾನ ನಡೆದಿತ್ತು. ಕೇಂದ್ರ ಚುನಾವಣಾ ಆಯೋಗದ ಪ್ರಕಾರ ಶೇ.60.54ರಷ್ಟು ಮತಗಳು ಚಲಾವಣೆಯಾಗಿದೆ. 2020 ಕ್ಕೆ ಹೋಲಿಸಿದರೆ ಶೇ 2.5 ರಷ್ಟು ಕಡಿಮೆಯಾಗಿದೆ.
ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲು ವಿಫಲವಾಗಿದ್ದ ಬಿಜೆಪಿ ಈ ಬಾರಿ ಸರಳ ಬಹುಮತದ ಗಡಿ ದಾಟಿ ಅಧಿಕಾರಕ್ಕೇರಲಿದ್ದರೆ, ಆಡಳಿತಾರೂಢ ಎಎಪಿ ಎರಡನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎರಡು ಚುನಾವಣೋತ್ತರ ಸಮೀಕ್ಷೆಗಳು ಮಾತ್ರ ಆಮ್ ಆದ್ಮ ಪಕ್ಷ (ಎಎಪಿ) ಮತ್ತೆ ಅಧಿಕಾರದ ಗದ್ದುಗೆ ಮರಳಲಿದೆ ಎಂದಿವೆ.