ಪಾಕ್ ಪರ ಘೋಷಣೆ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ದೃಢವಾಗಿರುವುದಕ್ಕೂ ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂಬುದಕ್ಕೂ ಏನು ಸಂಬಂಧ? ಇದನ್ನು ನಮ್ಮ ಸರ್ಕಾರ ಹೇಳಿ ಮಾಡಿಸಿಲ್ಲ. ಆರೋಪಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಂಡಿದ್ದೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ದೃಢವಾಗಿದೆ. ವರದಿಯಲ್ಲಿ ಯಾರು ಕೂಗಿದ್ದಾರೆಂಬುವುದು ಬಹಿರಂಗೊಂಡಿಲ್ಲ” ಎಂದರು.
“ಈ ಹಿಂದೆಯೇ ನಾನು ಹೇಳುತ್ತಿದ್ದೆ ಎಫ್ಎಸ್ಎಲ್ ವರದಿ ಬರಲಿ ಕ್ರಮ ಕೈಗೊಳ್ಳುತ್ತೇವೆ ಅಂತ. ಖಾಸಗಿಯವರು ಕೂಡ ಎಫ್ಎಸ್ಎಲ್ ವರದಿ ಬಿಡುಗಡೆ ಮಾಡಿದ್ದರು. ಆದರೆ ಇದನ್ನು ಅಧಿಕೃತ ಅಂತ ಹೇಳಲು ಆಗಲ್ಲ. ನಮ್ಮ ಗೃಹ ಇಲಾಖೆಯ ಎಫ್ಎಸ್ಎಲ್ ವರದಿ ಆಧಾರದ ಮೇಲೆ ಬಂಧನ ಮಾಡಿದ್ದೇವೆ. ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
“ನ್ಯಾಯ ಅನ್ನೋದು ಎಲ್ಲರಿಗೂ ಒಂದೇ ಅಲ್ವಾ? ವಿರೋಧ ಪಕ್ಷದವರು ಸುಮ್ಮನೇ ಹೇಳುತ್ತಿರುತ್ತಾರೆ. ಅವರು ಹೇಳುತ್ತಾರೆ ಅಂತ ಬಂಧಿಸಲಾಗುತ್ತಾ? ಮಂಡ್ಯದಲ್ಲಿ ಬಿಜೆಪಿಯವರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಹೀಗಾಗಿ ಕ್ರಮ ಕೈಗೊಂಡಿದ್ದೇವೆ” ಎಂದರು.
ಎನ್ಐಎಗೆ ಪ್ರಕರಣ ಹಸ್ತಾಂತರ
“ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಪೊಲೀಸರು ಅವರಿಗೆ ಪ್ರಕರಣವನ್ನು ಹಸ್ತಾಂತರ ಮಾಡಲಿದ್ದಾರೆ. ಪೊಲೀಸರು ಮಾಹಿತಿಯನ್ನ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಆರೋಪಿ ಬಸ್ನಲ್ಲಿ ಬಂದಿದ್ದನು ಅಂತ ಮಾಹಿತಿ ಇದೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಕೂಡ ಕೊಡಲಾಗಿದೆ. ಎನ್ಐಎ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದಾರೆ. ಭಯೋತ್ಪಾದನಾ ನಿಗ್ರಹ ದಳ ಕೂಡ ಇದಕ್ಕಾಗಿ ಕೆಲಸ ಮಾಡುತ್ತಿದೆ” ಎಂದು ವಿವರಿಸಿದರು.