ರಾಜ್ಯದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹತ್ತಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳಿಗಾಗಿ ಮುಂದಾಗಿತ್ತು. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೂ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪರವಾಗಿ ಧ್ವನಿ ಎತ್ತಿದ್ದರು.
ಗುರುವಾರ (ಏ.3) ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್ ಅವರು ಪಾಲ್ಗೊಂಡು ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ಸಭೆ ಫಲಪ್ರದವಾಗಿದ್ದು “ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ” ಸ್ಥಾಪಿಸುವ ತೀರ್ಮಾನಕ್ಕೆ ಬರಲಾಗಿದೆ.
ಸಂಬಂಧಿತ ಸಂಸ್ಥೆಗಳಿಂದ ಶೇ.5 ರಷ್ಟು ಸೆಸ್ ಸಂಗ್ರಹಿಸುವುದು ಮತ್ತು ಉಳಿದ ಅಗತ್ಯ ಹಣವನ್ನು ಸರ್ಕಾರವೇ ಭರಿಸಿ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೂವರು ಸಚಿವರ ನೇತೃತ್ವದಲ್ಲಿ ನಡೆದ ಸಭೆಗೆ ಆಗಮಿಸಲು ಗಿಗ್ ಕಾರ್ಮಿಕರ ವಲಯದ ಪರವಾಗಿ ಮೂವರು ಕಾರ್ಯಕರ್ತರಿಗೂ ಅವಕಾಶ ಒದಗಿಸಲಾಗಿತ್ತು. ರಾಜ್ಯದವರಾದ ರಕ್ಷಿತಾ ದೇವ್, ಹೈದ್ರಾಬಾದಿನ ಶೇಖ್ ಸಲಾಹುದ್ದೀನ್, ನಿಖಿಲ್ ದೇವ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಮಿಕ ಇಲಾಖೆ ಸಿದ್ದಪಡಿಸಿದ್ದ ಎಲ್ಲ ಎಂಟು ಅಂಶಗಳನ್ನೂ ರಾಹುಲ್ ಗಾಂಧಿ ಅವರು ಮೆಚ್ಚಿಕೊಂಡಿದ್ದಾರೆ. ಮುಂದಿನ ಹಂತವಾಗಿ ಸಮಗ್ರ ಅಂಶಗಳನ್ನು ಒಳಗೊಂಡ ಮಸೂದೆಯನ್ನು ಸಂಪುಟದ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ. ಕಾರ್ಮಿಕ ಇಲಾಖೆ ಈಗಾಗಲೇ ಕಾರ್ಮಿಕರ ಗ್ರಾಚುಟಿ, ಸಿನಿಮಾ ಕಾರ್ಮಿಕರ ಬಿಲ್ ಸೇರಿ ಮೂರು ಪ್ರಮುಖ ಮಸೂದೆಗಳನ್ನು ಜಾರಿಗೆ ತಂದಿದ್ದು ಈಗ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾಯ್ದೆ ತರಲು ಮುಂದಾಗಿರುವುದಕ್ಕೆ ರಾಜ್ಯದ ಅಸಂಘಟಿತ ಕಾರ್ಮಿಕ ವಲಯ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು ಸರ್ಕಾರದ ಈ ಕಾಳಜಿಗೆ ಅಭಿನಂದಿಸಿದ್ದಾರೆ.