ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸಿಎಂ ಸಿದ್ದರಾಮಯ್ಯ ಅವರು ಸಚಿವರು ಸೇರಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವನ್ನು ಮುನ್ನೆಲೆಗೆ ತಂದಿರುವ ಸಚಿವ ಕೆ ಎನ್ ರಾಜಣ್ಣ ಅವರಿಗೆ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿ, ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಸಿದ್ದಾರೆ.
ಬಹಿರಂಗ ಹೇಳಿಕೆಗಳಿಂದ ಸರ್ಕಾರ, ಪಕ್ಷದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತಿದೆ? ಪ್ರತಿಪಕ್ಷಗಳಿಗೆ ಇದು ಹೇಗೆ ಅಸ್ತ್ರವಾಗಲಿದೆ ಎಂಬುದನ್ನು ಮುಖ್ಯಮಂತ್ರಿಗಳು ರಾಜಣ್ಣಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ, ಆರಂಭದಲ್ಲಿ ರಾಜಣ್ಣ ಹೆಚ್ಚುರಿ ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿದ್ದರು. ನಂತರ ಕಾಂಗ್ರೆಸ್ ಶಾಸಕರು, ಸಚಿವರ ಹೇಳಿಕೆ, ಪ್ರತಿ ಹೇಳಿಕೆಗಳು ಮುಂದುವರಿದು ಗೊಂದಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೆಲ ನಾಯಕರು ಹೈಕಮಾಂಡ್ ಭೇಟಿಗಾಗಿ ದೆಹಲಿಗೂ ತೆರಳಿದ್ದರು.
ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಚಿವರ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿಸಿಎಂ ಡಿಕೆ ಶಿವಕುಮಾರ್, ಯಾರು ಏನು ಬೇಕಾದರೂ ಹೇಳಲಿ, ಬಹಿರಂಗವಾಗಿ ಚರ್ಚಿಸಲ್ಲ ಎಂದಿದ್ದರು.