Homeಕರ್ನಾಟಕಮುಖ್ಯಮಂತ್ರಿಗಳನ್ನು ಕೊಲೆಗಡುಕ ಎಂದವರ ವಿರುದ್ದ ಕ್ರಮಕ್ಕೆ ಸೂಚನೆ: ಡಿಸಿಎಂ ಡಿ ಕೆ ಶಿವಕುಮಾರ್

ಮುಖ್ಯಮಂತ್ರಿಗಳನ್ನು ಕೊಲೆಗಡುಕ ಎಂದವರ ವಿರುದ್ದ ಕ್ರಮಕ್ಕೆ ಸೂಚನೆ: ಡಿಸಿಎಂ ಡಿ ಕೆ ಶಿವಕುಮಾರ್

ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಯವರು, ನಾನು ಸೇರಿದಂತೆ ಅನೇಕರನ್ನು ಟೀಕೆ ಮಾಡುತ್ತಿರುವವರ ಹೆಸರುಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಅವರನ್ನು ದೊಡ್ಡ ನಾಯಕರಂತೆ ಬಿಂಬಿಸುವುದು ಬೇಡ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳ ಶಾಸಕರಿಗೆ ಕಿವಿಮಾತು ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನ ಹಕ್ಕಿಗೆ ಚ್ಯುತಿ ತರುತ್ತಿದ್ದಾರೆ. ಹೀಗಾಗಿ ನಾನು ಹಕ್ಕುಚ್ಯುತಿ ನಿರ್ಣಯ ಮಂಡಿಸುತ್ತೇನೆ’ ಎಂದರು. ಈ ವೇಳೆ ವಿರೋಧ ಪಕ್ಷಗಳ ಶಾಸಕರು, ಕೆಲವರು ಮುಖ್ಯಮಂತ್ರಿಗಳನ್ನು ಕೊಲೆಗಡುಕ ಎಂದು ಹೇಳಿದ್ದರೂ ಸರ್ಕಾರ ಸುಮ್ಮನೆ ಕೂತಿದೆ ಎಂದು ಧ್ವನಿಗೂಡಿಸಿದರು.

ಈ ವೇಳೆ ಮಾತನಾಡಿದ ಡಿಸಿಎಂ ಶಿವಕುಮಾರ್ ಅವರು, “ಯಾರು ಯಾವ ಯಾವ ಹೇಳಿಕೆ ನೀಡಿದ್ದಾರೆ ಎಂದು ನಾನು ನೋಡಿದ್ದೇನೆ. ಮುಖ್ಯಮಂತ್ರಿಯವರನ್ನು ಕೊಲೆಗಡುಕ ಎಂದು ಹೇಳಿರುವುದನ್ನೂ ನೋಡಿದ್ದೇನೆ. ನನ್ನ ಬಗ್ಗೆಯೂ ಮಾತನಾಡಿದ್ದಾರೆ. ನಿಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಗ್ಗೆ ಕೂಡ ಇಂದು ಬೆಳಗ್ಗೆ ಮಾತನಾಡಿದ್ದೂ, ಅದು ಕೂಡ ನನ್ನ ಮೊಬೈಲ್ ನಲ್ಲಿದೆ. ಈ ರೀತಿ ಹೇಳಿಕೆಗಳನ್ನು ನೀಡುತ್ತಿರುವವರ ಹೆಸರನ್ನು ವಿಧಾನಸಭೆಯಲ್ಲಿ ಹೇಳಿ ಅವರನ್ನು ನಾಯಕರನ್ನಾಗಿ ಮಾಡುವುದು ಬೇಡ. ಈ ವಿಚಾರವಾಗಿ ಗೃಹ ಸಚಿವರು ಹೇಳುವುದನ್ನು ಕೇಳೋಣ” ಎಂದರು.

“ತಮ್ಮ ಮೇಲೆ ಕೊಲೆ ಆರೋಪ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಾದ ಶಿವಲಿಂಗೇಗೌಡ ಅವರು ಈ ವಿಚಾರ ಪ್ರಸ್ತಾಪಿಸಿದ್ದರು. ನಾನು ಸಿಎಂಗೆ ಈ ಬಗ್ಗೆ ವಿವರಿಸಿದೆ. ಅವರು ಬಳಸಿದ ಭಾಷೆ ಎಲ್ಲವನ್ನು ನೋಡಿದ್ದೇನೆ. ನಾನು ಗೃಹ ಸಚಿವನಲ್ಲದಿದ್ದರೂ ಅನೇಕರು ನನಗೆ ಈ ವಿಚಾರಗಳನ್ನು ಕಳುಹಿಸುತ್ತಿದ್ದಾರೆ. ಅದೇ ಸಭೆಯಲ್ಲಿ ಮುಖ್ಯಮಂತ್ರಿಗಳು ಗೃಹ ಸಚಿವರಿಗೆ ಯಾವ ನಿರ್ದೇಶನ ನೀಡಬೇಕೋ ನೀಡಿದ್ದಾರೆ. ಈ ವಿಚಾರವನ್ನು ಈ ಸದನದಲ್ಲಿ ಚರ್ಚೆ ಮಾಡುವುದು ಬೇಡ. ಗೃಹ ಸಚಿವರು ಈ ವಿಚಾರ ನಿಭಾಯಿಸುತ್ತಾರೆ” ಎಂದರು.

ಟಿಬಿ ಡ್ಯಾಂ ವಿಚಾರವಾಗಿ ನೀಡುವ ಉತ್ತರ ಮೂರು ರಾಜ್ಯಗಳ ಮೇಲೆ ಪರಿಣಾಮ

ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಅವರು ತುಂಗಭದ್ರಾ ಅಣೆಕಟ್ಟಿನ ಆರು ಕ್ರೆಸ್ಟ್ ಗೇಟ್ ಗಳಲ್ಲಿ ದೋಷ ಕಾಣಿಸಿಕೊಂಡಿರುವ ಬಗ್ಗೆ ಕೇಳಿದಾಗ, ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. “ಮೊನ್ನೆ ನಮ್ಮ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದ್ದರು. ನಮ್ಮ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅಣೆಕಟ್ಟೆಗೆ ಭೇಟಿ ನೀಡಿದ್ದರು. ಇದು ಸೂಕ್ಷ್ಮ ವಿಚಾರ. ಹೀಗಾಗಿ ನಾನು ಅಂದೇ ಉತ್ತರ ನೀಡಲಿಲ್ಲ. ಅಣೆಕಟ್ಟೆಯ ವಿಚಾರ ಚರ್ಚೆ ಮಾಡಲು ತೆಲಂಗಾಣ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಸಭೆಗೆ ಸಮಯ ಕೇಳಿದ್ದೆ. ಈ ವಿಚಾರವನ್ನು ನಿಯಮ 69 ರ ಅಡಿಯಲ್ಲಿ ಚರ್ಚೆಗೆ ಸೇರಿಸಲಾಗಿದೆ. ಈ ವಿಚಾರವಾಗಿ ಅನೇಕರು ಚರ್ಚೆ ಮಾಡಲು ಸಿದ್ಧರಿದ್ದು, ಈ ಚರ್ಚೆ ವೇಳೆ ನಾನು ವಿವರವಾದ ಉತ್ತರ ನೀಡುತ್ತೇನೆ. ಈ ಉತ್ತರ ನಮ್ಮ ರಾಜ್ಯದ 4 ಜಿಲ್ಲೆಗಳು ಸೇರಿದಂತೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ” ಎಂದು ತಿಳಿಸಿದರು.

ಖೈದಿಗಳ ಜೊತೆ ಸಂಪರ್ಕ ಚೆನ್ನಾಗಿರುವುದಕ್ಕೆ ಇದೇ ಸಾಕ್ಷಿ

ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರಿನ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಿರುವ ಕಾರಣಕ್ಕೆ ಸುತ್ತಲಿನ ಪ್ರದೇಶಗಳ ಜನರು ಮೊಬೈಲ್ ಬಳಸಲು ಪರದಾಡುವಂತಾಗಿದೆ, ಆದರೆ ಜೈಲಿನ ಒಳಗೆ ನೆಟ್ ವರ್ಕ್ ದೊರೆಯುತ್ತಿದೆ ಎಂದು ವಿಚಾರ ಪ್ರಸ್ತಾಪಿಸಿದರು. ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಜಾಮರ್ ಅಳವಡಿಕೆಯಿಂದ ಜನರಿಗೆ ತೊಂದರೆಯಾಗುತ್ತಿರುವುದು ನಿಜ. ಆದರೆ, ಜೈಲಿನ ಒಳಗೆ ನೆಟ್ ವರ್ಕ್ ಸಿಗುತ್ತದೆ ಎಂದು ಇವರಿಗೆ ಹೇಗೆ ತಿಳಿದಿದೆ. ಜೈಲಿನ ಒಳಗೆ ಇವರಿಗೆ ಸಂಪರ್ಕ ಇದೆಯೇ?” ಎಂದು ಕಿಚಾಯಿಸಿದರು. ನಂತರ “ಗೃಹಸಚಿವರು ಇದಕ್ಕೆ ಉತ್ತರಿಸುತ್ತಾರೆ” ಎಂದು ವಿರೋಧ ಪಕ್ಷದ ಶಾಸಕರ ಕಾಲೆಳೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments