ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ, ಗ್ರಾಪಂ ಸದಸ್ಯರೊಬ್ಬರು ಬರ್ಬರವಾಗಿ ಹತ್ಯೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಶುಕ್ರವಾರ ರಾತ್ರಿ 10:30ರ ಸುಮಾರಿಗೆ ನಡೆದಿದೆ.
ಗಣೇಶ್ ಗೌಡ(38) ಕೊಲೆ ವ್ಯಕ್ತಿ. ಇವರು ಸಖರಾಯಪಟ್ಟಣ ಗ್ರಾಪಂ ಸದಸ್ಯರಾಗಿದ್ದರು. ಗಣೇಶ್ ಮುಂದೆ ಬರಲಿರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಖರಾಯಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಕೊಲೆಗೂ ಮುನ್ನ ಶುಕ್ರವಾರ ರಾತ್ರಿ 10:30ರ ವೇಳೆ ಸಖರಾಯಪಟ್ಟಣ ಬಾರ್ ಬಳಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಬಾರ್ ಬಳಿ ಗಲಾಟೆ ನಡೆದ ಅರ್ಧ ಗಂಟೆ ನಂತರ ಮಠದ ಬಳಿ ಮತ್ತೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ಹೋಗಿ ಮಚ್ಚಿನಿಂದ ಗಣೇಶ್ ಮೇಲೆ ಹಲ್ಲೆ ನಡೆದು ಹತ್ಯೆ ಮಾಡಲಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸಂಜಯ್, ಭೂಷಣ್, ಮಿಥುನ್ ಎಂಬವರು ಸೇರಿದಂತೆ ಬಿಜೆಪಿ, ಬಜರಂಗದಳದ ಐವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.


