ತನ್ನ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆಂಬ ಆರೋಪದಲ್ಲಿ ಚಿತ್ರದುರ್ಗದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿಸಿದ ನಂತರ ಕೊಲೆ ಪ್ರಕರಣದಿಂದ ಪಾರಾಗಲು ನಟ ದರ್ಶನ್ ತನ್ನ ಸಹಚರರಿಗೆ ನೀಡಿದ್ದ 30 ಲಕ್ಷ ರೂ ಸೇರಿ 40 ಲಕ್ಷ ಹಣವನ್ನು ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ನಿಂದ ಪಡೆದಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಮಾಜಿ ಕಾರ್ಪೊರೇಟರ್ ವಿವರ ಸಂಗ್ರಹಿಸಿರುವ ತನಿಖಾ ತಂಡ ಅವರ ವಿಚಾರಣೆಗೆ ಮುಂದಾಗಿದೆ. ಇದರ ಬೆನ್ನಲ್ಲೇ ಆತ ಯಾರೊಬ್ಬರ ಕಣ್ಣಿಗೂ ಬೀಳದೆ ನಾಪತ್ತೆಯಾಗಿದ್ದಾರೆ.
ಕೊಲೆಯ ಸಾಕ್ಷಿ ನಾಶ ಮಾಡುವುದಕ್ಕೆ 40 ಲಕ್ಷ ರೂಪಾಯಿಗಳನ್ನು ಮಾಜಿ ಕಾರ್ಪೊರೇಟರ್ ಆಗಿರುವ ಮೋಹನ್ ರಾಜ್ ರಿಂದ ದರ್ಶನ್ ಪಡೆದಿದ್ದಾರೆ. ಅದನ್ನು ಪೊಲೀಸರು ಜಪ್ತಿ ಮಾಡಿದ್ದು, ಹಣದ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಮಾಜಿ ಕಾರ್ಪೊರೇಟರ್ ಮೋಹನ್ ರಾಜ್ ಅವರು ನಟ ದರ್ಶನ್‌ಗೆ ಆಪ್ತ ಸ್ನೇಹಿತನಾಗಿದ್ದು, ಅವರಿಂದ 40 ಲಕ್ಷ ರೂ ಪಡೆದು ತನ್ನ ಹೆಸರು ಎಲ್ಲಿಯೂ ಕಾಣಿಸಿಕೊಳ್ಳದಂತೆ ತಿಳಿಸಿದ್ದಾನೆ ಎನ್ನುವುದು ತನಿಖಾ ಸಮಯದಲ್ಲಿ ಪತ್ತೆಯಾಗಿದೆ.
ಹಣ ಪಡೆಯುವಾಗ ಮೋಹನ್ ರಾಜ್‌ಗೆ ಈ ಕೊಲೆಯ ಬಗ್ಗೆ ತಿಳಿದಿತ್ತೇ ಇಲ್ಲವೇ ಎನ್ನುವುದು ಈಗ ತನಿಖೆಯಿಂದ ಪತ್ತೆಯಾಗಬೇಕಿದೆ. ಒಂದು ವೇಳೆ ಕೊಲೆಯ ವಿಷಯ ಗೊತ್ತಿತ್ತು ಎಂದಾದರೆ, ಕೊಲೆ ಪ್ರಕರಣ ಮೋಹನ್ ರಾಜ್ ಕೊರಳಿಗೂ ಸುತ್ತಿಕೊಳ್ಳಲಿದೆ.
ಹಣದ ಬಗ್ಗೆ ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆ. ಮೋಹನ್ ರಾಜ್‌ಗಾಗಿ ತನಿಖಾ ತಂಡ ಹುಡುಕಾಟ ನಡೆಸುತ್ತಿದ್ದು, ಬಂಧನ ಸಾಧ್ಯತೆಯೂ ಇದೆ. ಮೋಹನ್ ರಾಜ್ ಬೊಮ್ಮನಹಳ್ಳಿ ವಾರ್ಡ್ ಕಾರ್ಪೋರೇಟರ್ ಆಗಿದ್ದರು. 2019ರಲ್ಲಿ ಉಪಮೇಯರ್ ಆಗಿದ್ದು ಆಗಿ ರಾಜಕೀಯ ವಲಯದಲ್ಲಿ ಸಾಕಷ್ಟು ಪ್ರಭಾವಿಯೂ ಆಗಿದ್ದಾರೆ.
ಈ ಪ್ರಕರಣದಲ್ಲಿ ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್ ರಾಜ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇದರಿಂದ ಅವರ ಮನೆಗೆ ಹೋಗಿ ನೋಟಿಸ್ ನೀಡಲು ಕಾಮಾಕ್ಷಿ ಪಾಳ್ಯ ಪೊಲೀಸರು ಮುಂದಾಗಿದ್ದಾರೆ. ಬಂಧಿತರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ.